ಜೆಡಿಎಸ್ ಕೈಕೊಟ್ಟ ಪರಿಣಾಮವಾಗಿ ಸದನದಲ್ಲಿ ಬಹುಮತ ಸಾಬೀತುಪಡಿಸಲು ವಿಫಲವಾದ 7 ದಿನಗಳ ಪ್ರಾಯದ ಯಡಿಯೂರಪ್ಪ ಸರಕಾರವು ಸೋಮವಾರ ಸಂಜೆ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿರುವುದರೊಂದಿಗೆ ಕರ್ನಾಟಕ ವಿಚಿತ್ರ ರಾಜಕೀಯದ ಒಂದು ಅಧ್ಯಾಯಕ್ಕೆ ಅಂಕದ ಪರದೆ ಬಿತ್ತು.
ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರಕಾರ ಇದರ ಮೂಲಕ ಅಲ್ಪಾಯುಷಿಯಾಗಿ ಇತಿಹಾಸ ಸೇರಿತು.
ಸದನದಲ್ಲಿ ವಿಶ್ವಾಸಮತ ಯಾಚಿಸಿ ಗೊತ್ತುವಳಿ ಮಂಡಿಸಿದ ಯಡಿಯೂರಪ್ಪ ಅವರು ವಿಶ್ವಾಸದ್ರೋಹ ಎಸಗಿದ ಜೆಡಿಎಸ್ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಸಂಜೆ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದರು.
ಇದೀಗ ಮುಂದೇನು ಎಂಬುದು ಎಲ್ಲರ ಕುತೂಹಲವಾಗಿದ್ದು, ಮತ್ತೆ ರಾಷ್ಟ್ರಪತಿ ಆಡಳಿತ ಮುಂದುವರಿಯುವುದೇ ಅಥವಾ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ದಿಢೀರ್ ಆಗಿ ದೆಹಲಿಗೆ ದೌಡಾಯಿಸಿರವುದರಿಂದ ಜೆಡಿಎಸ್ ಪಕ್ಷವು ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆಯೇ ಎಂಬ ಊಹಾಪೋಹಗಳಿಗೆ ಚಾಲನೆ ದೊರೆತಿದೆ.
|