ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಲು ಸಾಧ್ಯವಾಗದೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ನೀಡಿದ ರಾಜೀನಾಮೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ಅಂಗೀಕರಿಸಿದ್ದಾರೆ.
ರಾಜ್ಯದಲ್ಲಿ ಮತ್ತೊಮ್ಮೆ ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆಯೂ ರಾಜ್ಯಪಾಲರು ಕೇಂದ್ರಕ್ಕೆ ಸೋಮವಾರ ರಾತ್ರಿ ತಮ್ಮ ವರದಿಯನ್ನು ರವಾನಿಸಿದ್ದಾರೆ. ಈ ಕುರಿತು ಮಂಗಳವಾರದಂದು ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದೆ. ಮುಂದಿನ ಪರ್ಯಾಯ ವ್ಯವಸ್ಥೆ ಆಗುವ ತನಕ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆಯೂ ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ.
ಕಳೆದ ಸೋಮವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರು, ವಿಧಾನಸಭೆಯಲ್ಲಿ ಸೋಮವಾರ ಬಹುಮತ ಸಾಬೀತುಪಡಿಸಬೇಕಿತ್ತು. ಕೊನೆಗಳಿಗೆಯಲ್ಲಿ ಮಿತ್ರಪಕ್ಷ ಜೆಡಿಎಸ್ ವಿಶ್ವಾಸಮತದ ನಿರ್ಣಯದ ಮೇಲೆ ಚರ್ಚೆ ನಡೆಯುತ್ತಿದ್ದಾಗಲೇ ಏಕಾಏಕಿ ರಾಜೀನಾಮೆ ಪ್ರಕಟಿಸಿದ ಯಡಿಯೂರಪ್ಪ ಅವರು ಅಲ್ಲಿಂದ ನೇರವಾಗಿ ರಾಜಭವನಕ್ಕೆ ಬಂದು ರಾಜ್ಯಪಾಲರಿಗೆ ರಾಜೀನಾಮೆ ನೀಡಿದರು.
ಬಿಜೆಪಿಯನ್ನು ನಂಬಿಸಿ ಬೇಷರತ್ ಬೆಂಬಲ ನೀಡುವುದಾಗಿ ಹೇಳಿ ವಾಪಸು ಕರೆಸಿಕೊಂಡ ಜೆಡಿಎಸ್ ನಂತರ ಷರತ್ತುಗಳನ್ನು ವಿಧಿಸಿ ಛಾಪಾ ಕಾಗದದ ಮೇಲೆ ಸಹಿ ಮಾಡಿಕೊಡುವಂತೆ ಹಾಗೂ ಕೆಲವು ಖಾತೆಗಳಿಗೆ ಪಟ್ಟು ಹಿಡಿದ ಪರಿಣಾಮ ಎರಡೂ ಪಕ್ಷಗಳ ನಡುವಿನ ಸಂಬಂಧ ಕಡಿದು ಹೋಗಿದೆ.
|