ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಪುನಃ ಮುರಿದುಬಿದ್ದ ಬಳಿಕ ಕೇವಲ ಒಂದು ತಿಂಗಳೊಳಗೆ ರಾಷ್ಟ್ರಪತಿ ಆಡಳಿತವನ್ನು ಎರಡನೇ ಬಾರಿಗೆ ಜಾರಿಗೆ ತರುವ ಘೋಷಣೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಹಿ ಹಾಕಿದ್ದು ವಿಧಾನಸಭೆಯನ್ನು ಅಮಾನತಿನಲ್ಲಿರಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ವಿಧಾನಸಭೆ ವಿಸರ್ಜನೆ ನಿರ್ಧಾರವನ್ನು ಈ ಬಗ್ಗೆ ಸಂಸತ್ತಿನ ಅನುಮೋದನೆ ಪಡೆದ ಬಳಿಕ ಕೈಗೊಳ್ಳುತ್ತದೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಶಿಫಾರಸ್ಸನ್ನು ಅಂಗೀಕರಿಸಿದ ಕೇಂದ್ರ ಸಚಿವಸಂಪುಟ ರಾಷ್ಟ್ರಪತಿ ಆಳ್ವಿಕೆಗೆ ಸಲಹೆ ಮಾಡಿದ ಬಳಿಕ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಘೋಷಣೆಗೆ ಸಹಿ ಹಾಕಿ ರಾಜ್ಯವನ್ನು ರಾಷ್ಟ್ರಪತಿ ಆಳ್ವಿಕೆಗೆ ಒಳಪಡಿಸಿದರೆಂದು ಮೂಲಗಳು ಹೇಳಿವೆ.
ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸ ಮತದ ಗೊತ್ತುವಳಿ ವಿರುದ್ಧ ಮತ ಚಲಾಯಿಸಲು ಜೆಡಿಎಸ್ ನಿರ್ಧರಿಸಿದ್ದರಿಂದ ರಾಜ್ಯದಲ್ಲಿ ಪ್ರಪ್ರಥಮ ಬಿಜೆಪಿ ಸರ್ಕಾರ ಅಧಿಕಾರವನ್ನು ಕೈಗೆ ತೆಗೆದುಕೊಂಡ ಗಳಿಗೆಯಲ್ಲೇ ಪತನಹೊಂದಿತು.
ಪ್ರಧಾನಮಂತ್ರಿ ಸಿಂಗಪುರಕ್ಕೆ ತೆರಳುವ ಮುನ್ನ ನಡೆದ ನಸುಕಿನ ಕೇಂದ್ರ ಸಂಪುಟ ಸಭೆಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವ ನಿರ್ಧಾರ ಕೈಗೊಳ್ಳಲಾಯಿತು.ಕೇಂದ್ರ ಸಚಿವ ಸಂಪುಟವು ರಾಜ್ಯಪಾಲರ ವರದಿಯನ್ನು ಅಂಗೀಕರಿಸಿ ಕರ್ನಾಟಕದಲ್ಲಿ ತಕ್ಷಣವೇ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರುವಂತೆ ರಾಷ್ಟ್ರಪತಿಗೆ ಶಿಫಾರಸು ಕಳಿಸಲಾಯಿತು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪಿ.ಆರ್. ದಾಸ್‌ಮುನ್ಷಿ ತಿಳಿಸಿದರು.
|