ಶೀಘ್ರದಲ್ಲೇ ಚುನಾವಣೆ ನಡೆಯುವಂತಾಗಲು ಕರ್ನಾಟಕದಲ್ಲಿ ವಿಧಾನಸಭೆ ವಿಸರ್ಜಿಸಬೇಕೆಂದು ಎಡಪಕ್ಷಗಳು ಮಂಗಳವಾರ ಒತ್ತಾಯಿಸಿದ್ದು, ರಾಜ್ಯದಲ್ಲಿ ಸುಭದ್ರ ಸರ್ಕಾರ ಸ್ಥಾಪನೆಗೆ ಬೇರೆ ದಾರಿಯೇ ಇಲ್ಲ ಎಂದು ತಿಳಿಸಿದೆ. ಬಿಜೆಪಿಯ ಅವಕಾಶವಾದಿ ಪಾತ್ರವನ್ನು ಕುರಿತು ಟೀಕಿಸಿದ ಸಿಪಿಎಂ ಮತ್ತು ಸಿಪಿಐ ಜೆಡಿಎಸ್ ಪಕ್ಷದಲ್ಲಿ ಕೂಡ ವಿಶ್ವಾಸಾರ್ಹತೆ ಕುಂದಿರುವುದಾಗಿ ಹೇಳಿದೆ.
ಕೇಸರಿ ಪಕ್ಷದ ಅವಕಾಶವಾದಿ ಪಾತ್ರದ ಬಗ್ಗೆ ರಾಜ್ಯದ ವಿದ್ಯಮಾನಗಳು ಗಮನಸೆಳೆದಿವೆ ಎಂದು ಸಿಪಿಎಂ ಪಾಲಿಟ್‌ಬ್ಯೂರೊ ಹೇಳಿಕೆಯಲ್ಲಿ ತಿಳಿಸಿದೆ. ಅದು ಪ್ರಜಾಪ್ರಭುತ್ವ ನಿಯಮಗಳನ್ನು ಗಾಳಿಗೆ ತೂರಿದೆ. ರಾಜ್ಯಪಾಲರ ಎದುರು ಧರಣಿ ಮತ್ತು ರಾಷ್ಟ್ರಪತಿ ಎದುರು ಶಾಸಕರ ಪರೇಡ್ ನಡೆಸುವ ಮೂಲಕ ವಿಧಾನಸಭೆ ವಿಸರ್ಜಿಸಬೇಕೆಂಬ ತಮ್ಮ ಮುಂಚಿನ ಬೇಡಿಕೆಯನ್ನು ಮೂಲೆಗೆ ತಳ್ಳಿತು ಎಂದು ಅದು ಟೀಕಿಸಿದೆ.
ಏನೇ ಆಗಿರಲಿ, ಕೋಮುವಾದಿ ಪಕ್ಷವು ಸರ್ಕಾರವನ್ನು ಮುನ್ನಡೆಸುವ ಅಪಾಯವು ತಪ್ಪಿಹೋಯಿತು ಎಂದು ಸಿಪಿಎಂ ತಿಳಿಸಿದೆ.ಈಗ ಯಾವುದೇ ಪಕ್ಷಕ್ಕೂ ಕಿಚಡಿ ಸರ್ಕಾರ ನಡೆಸಲು ಅವಕಾಶ ನೀಡಬಾರದು ಎಂದು ಹೇಳಿದ ಎಡಪಕ್ಷಗಳು ವಿಧಾನಸಭೆ ವಿಸರ್ಜಿಸಿ ಶೀಘ್ರ ಚುನಾವಣೆ ಘೋಷಿಸುವುದೊಂದೇ ಏಕೈಕ ಪರಿಹಾರ ಎಂದು ನುಡಿದಿದೆ.
|