ಅಕ್ಟೋಬರ್ 2 ರಂದು ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರವಾಗದಿದ್ದಾಗ ಸಹಜವಾಗಿಯೇ ಕುಮಾರಸ್ವಾಮಿ ವಚನಭ್ರಷ್ಟತೆಯ ಆರೋಪವನ್ನು ಹೊರಬೇಕಾಗಿ ಬಂದಿತ್ತು. ತಮ್ಮ ಇಮೇಜ್ ಘಾಸಿಗೊಂಡದ್ದರಿಂದ ಜನರ ವಿಶ್ವಾಸವನ್ನು ಮತ್ತೆ ಗಳಿಸುವ ನಿಟ್ಟಿನಲ್ಲಿ ಹೊಸತೊಂದು ಪ್ರಾದೇಶಿಕ ಪಕ್ಷವನ್ನು ಹುಟ್ಟುಹಾಕಲು ಅವರು ಚಿಂತನೆ ನಡೆಸಿದ್ದರು. ಅದರೆ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆದರೆ ಈಗ ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿಶ್ವಾಸ ಮತ ಯಾಚನೆಗೆ ವಿರುದ್ಧವಾಗಿ ಮತ ಚಲಾಯಿಸುವಂತೆ ಜೆಡಿಎಸ್ ವರಿಷ್ಠ ದೇವೇಗೌಡರು ತಮ್ಮ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿದ ಸಂದರ್ಭದಲ್ಲಿ ನೀಡಲಾದ ಕೆಲ ಕಾರಣಗಳಲ್ಲಿ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನೆಡೆಗೆ ತೋರಿದ ಅನಾದರವೂ ಒಂದು ಕಾರಣ ಎಂದೇ ಬಿಂಬಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರಾದೇಶಿಕ ಪಕ್ಷವೊಂದನ್ನು ಕಟ್ಟುವ ಚಿಂತನೆಗಳಿಗೆ ಈಗ ರೆಕ್ಕೆ ಪುಕ್ಕ ಬಂದಿದ್ದು, ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ಕಾರಣಗಳನ್ನು ಅವರು ಬಿಂಬಿಸಿದ್ದಾರೆ.
ಪ್ರಾದೇಶಿಕ ಪಕ್ಷಗಳೆಡೆಗೆ ರಾಷ್ಟ್ರೀಯ ಪಕ್ಷಗಳ ಇತ್ತೀಚಿನ ವರ್ತನೆ ಹಾಗೂ ಬೆಳವಣಿಗೆಗಳಿಂದ ಘಾಸಿಗೊಂಡು ಈ ನಿರ್ಧಾರಕ್ಕೆ ಬಂದಿರುವುದಾಗಿ ಕುಮಾರಸ್ವಾಮಿಯವರು ತಿಳಿಸಿದ್ದು, ಇದರೊಂದಿಗೆ ತಂದೆಯವರ ಕಪಿಮುಷ್ಠಿಯಿಂದ ಹೊರಬರುವ ಪ್ರಯತ್ನವೂ ಸೇರಿದೆ ಎಂದೇ ರಾಜಕೀಯ ವಲಯಗಳಲ್ಲಿ ಬಿಂಬಿತವಾಗುತ್ತಿದೆ.
ರಾಷ್ಟ್ರ ರಾಜಕೀಯದ ಪ್ರಮುಖ ನಿರ್ಧಾರಗಳನ್ನು ತಳೆಯುವಲ್ಲಿ ಪ್ರಾದೇಶಿಕ ಪಕ್ಷಗಳು ವಿಜೃಂಭಿಸುತ್ತಿವೆ. ಆಂಧ್ರಪ್ರದೇಶ, ತಮಿಳುನಾಡು ಮೊದಲಾದ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ವಿಷಯದಲ್ಲಿ ಇದಾಗಲೇ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕುಮಾರಣ್ಣ ತಳೆದಿರುವ ನಿಲುವು ಸೂಕ್ತವಾಗಿದೆ ಎಂದು ರಾಜಕೀಯದ ಕೆಲ ವಲಯಗಳು ಹೇಳಿವೆ.
ಆದರೆ ರಾಮಕೃಷ್ಣ ಹೆಗಡೆ, ದೇವರಾಜ ಅರಸು, ಎಸ್. ಬಂಗಾರಪ್ಪ, ಗುಂಡೂರಾವ್, ವಿಜಯ್ ಸಂಕೇಶ್ವರ ಇವರೇ ಮೊದಲಾದ ಘಟಾನುಘಟಿಗಳು ಪ್ರಾದೇಶಿಕ ಪಕ್ಷ ಕಟ್ಟಲು ಯತ್ನಿಸಿ ಕೈಸುಟ್ಟುಕೊಂಡ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವಿಲ್ಲ ಎಂಬ ಮತ್ತೊಂದು ಅಭಿಪ್ರಾಯವೂ ರಾಜಕೀಯದ ಕಾರಿಡಾರಿನಲ್ಲಿ ಹೊರಹೊಮ್ಮುತ್ತಿದೆ. ಒಟ್ಟಿನಲ್ಲಿ ಮತದಾರರು ಮತ್ತೊಂದು ರಾಜಕೀಯ ವೇದಿಕೆಯನ್ನು ಕುತೂಹಲದಿಂದ ಎದುರುನೋಡುವ ಕಾಲ ಬಂದಿದೆ.
|