ಕೆಲವೇ ಕೆಲವು ಜನ ಶಾಸಕರನ್ನು ಬಿಟ್ಟರೆ ಯಾರೂ ಚುನಾವಣೆ ಎದುರಿಸುವ ಸ್ಥಿತಿಯಲ್ಲಿಲ್ಲ. ಸರಿಯೋ ತಪ್ಪೋ, ಬಿಜೆಪಿ ಜತೆ ಸೇರ್ಕೊಂಡು ಸರ್ಕಾರ ರಚಿಸಿದ್ರೆ ಚೆನ್ನಾಗಿತ್ತು. ಈಗ ಎಲ್ಲರದೂ ಅತಂತ್ರ ಸ್ಥಿತಿ ಎಂಬ ಹತಾಶ ಭಾವನೆಯನ್ನು ವ್ಯಕ್ತಪಡಿಸಿದವರು ಬೆಳ್ಳಾವೆ ಶಾಸಕ, ಜೆಡಿಎಸ್‌ನ ರಾಜಣ್ಣ.
ತಮ್ಮ ಪಕ್ಷದ ನಾಯಕರ ವರ್ತನೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ಒಳ್ಳೇ ಬಸ್ ಟಿಕೆಟ್ ಕೊಟ್ಟ ಹಾಗೆ ಎಲ್ಲರಿಗೂ ವಿಪ್ ಕೊಟ್ರೆ ಏನ್ಮಾಡೋಕ್ಕಾಗುತ್ತೆ? ಕುರಿಗಳಂತೆ ಅನುಸರಿಸಬೇಕಿದೆ. ಒಟ್ಟಿನಲ್ಲಿ ಜನಗಳ ಹತ್ತಿರ ಥೂಛೀಛೀ ಅನ್ನಿಸಕೊಳ್ಳಬೇಕಾದ ಕಾಲ ಬಂದಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು.
ಕಾನೂನು ಎಲ್ಲರಿಗೂ ಒಂದೇ. ಒಟ್ಟಾಗಿ ಸರ್ಕಾರ ನಡೆಸ್ತೀವಿ ಅಂತ ಅಫಿಡವಿಟ್ ಕೊಟ್ಟ ಮೇಲೆ ಅದರಂತೆಯೇ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಅದು ಕಾನೂನಿನ ಉಲ್ಲಂಘನೆಯಾಗುತ್ತೆ. ಅದರೆ ಬಿಜೆಪಿಯವರೂ ಸೇರಿದಂತೆ ಯಾರೂ ಇದನ್ನು ಪ್ರಶ್ನಿಸ್ತಿಲ್ಲ ಎಂದು ರಾಜಣ್ಣ ತಮ್ಮ ಅಸಮಾಧಾನವನ್ನು ಮಾಧ್ಯಮದವರ ಮುಂದೆ ತೋಡಿಕೊಂಡರು. ಅವಧಿಗೆ ಮುಂಚೆಯೇ ಮತ್ತೊಮ್ಮೆ ಜನರ ಮುಂದೆ ಹೋಗಿ ನಿಲ್ಲುವಾಗಿನ ಅಸಹಾಯಕತೆ ಅವರ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು.
|