ನನೆಗುದಿಗೆ ಬಿದ್ದಿರುವ ಮಂಗಳೂರು-ಬೆಂಗಳೂರು ರೈಲು ಸಂಚಾರವನ್ನು ಪುನಃ ಸ್ಥಾಪಿಸಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಧರಣಿ, ಉಪವಾಸ ಸತ್ಯಾಗ್ರಹಗಳು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ.
ಪ್ರತಿಭಟನೆಯು ಸ್ವರೂಪ ದಿನಂಪ್ರತಿ ಬದಲಾಗುತ್ತಿದ್ದು ಬರಲಿರುವ ಚುನಾವಣಾ ದೃಷ್ಟಿಯಿಂದ ಜನರ ಬೆಂಬಲ ಪಡೆಯಲು ನಾ ಮುಂದು ತಾ ಮುಂದು ವಿವಿಧ ಪಕ್ಷಗಳ ರಾಜಕೀಯ ನಾಯಕರುಗಳು ಲಗ್ಗೆ ಹಾಕುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ಅವರು ಮಾಜಿ ಸಚಿವ ಬಿ. ನಾಗರಾಜಶೆಟ್ಟಿ ಹಾಗೂ ಜಿಲ್ಲಾ ಮುಖಂಡರೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುತ್ತಿರುವ ಪ್ರತಿಭಟನಾ ಶಿಬಿರಕ್ಕೆ ಭೇಟಿ ನೀಡಿದರು. ಕಳೆದ 11 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಯುವ ಮುಖಂಡ ಪಿ.ವಿ. ಮೋಹನ್ ಮತ್ತು ಅವರ ಸಂಗಡಿಗರನ್ನು ಭೇಟಿ ಮಾಡಿ ಪ್ರತಿಭಟನೆಯ ಮುಂದಿನ ಹಾದಿಯ ಬಗ್ಗೆ ಚರ್ಚಿಸಿದರು.
ಪಿ.ವಿ. ಮೋಹನ್ ಅವರಿಗೆ ಈಗಾಗಲೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಮಾನಾಥ ರೈ ಸೇರಿದಂತೆ ಹಲವಾರು ಮುಖಂಡರು ಆರಂಭದಲ್ಲೇ ಬೆಂಬಲ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರತಿಭಟನೆಯ ಮುಂದಿನ ಹೆಜ್ಜೆಯ ಅಂಗವಾಗಿ ಈ ತಿಂಗಳ 24ರಂದು ರೈಲು ರೋಕೋ ಚಳವಳಿಯನ್ನು ಬಿಜೆಪಿ ಹಮ್ಮಿಕೊಂಡಿದೆ. ಅಂದು ಮಂಗಳೂರು ಜಂಕ್ಷನ್‌ನಿಂದ ಹೊರಡಲಿರುವ ಪ್ಯಾಸೆಂಜರ್ ರೈಲುಗಳಾದ ಮಂಗಳೂರು - ಸುಬ್ರಹ್ಮಣ್ಯ, ಮಂಗಳೂರು - ಚೆನ್ನೈ, ಮಂಗಳೂರು - ತಿರುವನಂತಪುರ, ಮತ್ಸ್ಯ ಗಂಧಾ, ಚೆನ್ನೈ (ವಿಶೇಷ). ಕಣ್ಣೂರು, ಮಾವೇಲಿ ಮಲಬಾರ್ ಎಕ್ಸ್ಪ್ರೆಸ್ ರೈಲುಸಂಚಾರಕ್ಕೆ ತಡೆಯುಂಟು ಮಾಡಲು ನಿರ್ಧರಿಸಲಾಗಿದೆ.
ಈ ರೈಲು ರೋಕೋ ಚಳುವಳಿಯಲ್ಲಿ ಬಿಜೆಪಿಯ ಸುಮಾರು 15,000 ಕಾರ್ಯಕರ್ತರು ಭಾಗವಹಿಸುವ ನೀರೀಕ್ಷೆಯಿದೆ ಎಂದು ಜಿಲ್ಲಾಧ್ಯಕ್ಷ ಕೆ. ಮೋನಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಜನಹಿತ ದೃಷ್ಟಿಯಿರಲಿ. ಯಾವುದೇ ವೈಯುಕ್ತಿಕ ಲಾಭದ ವಿಚಾರ ಬೇಡವೆಂದಿರುವ ಸದಾನಂದಗೌಡರು ಈ ಚಳವಳಿಯ ನೇತೃತ್ವವನ್ನು ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿಯವರು ವಹಿಸಿದರೆ ಅವರಿಗೆ ಸಂಪೂರ್ಣ ಬೆಂಬಲ ಕೊಡಲು ಸಿದ್ಧ ಅಥವಾ ಅಂದು ನಮ್ಮ ಕರೆಗೆ ಓಗೊಟ್ಟು ಸ್ವತಃ ಸೋನಿಯಾಗಾಂಧಿಯವರೇ ಬಂದರೂ ಸರಿಯೇ! ಎಂದು ಕುಟುಕಿದ್ದಾರೆ.
ಪ್ರತಿಭಟನೆಯ ಹೆಸರಲ್ಲಿ ಜನ ಬೆಂಬಲ ಗಳಿಸಲು ರಾಜಕೀಯ ಪ್ರತಿನಿಧಿಗಳ ಜಗ್ಗಾಟ ಒಂದೆಡೆಯಾದರೆ ಇನ್ನೊಂದೆಡೆ ಮಂಗಳೂರು ರೈಲು ನಿಲ್ದಾಣ ಅಭಿವೃದ್ದಿ ಕ್ರಿಯಾ ಸಮಿತಿ, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಇನ್ನಿತರ ಸಂಘಟನೆಗಳೂ ಕೈಜೋಡಿಸಿರುವುದು ಮುಂದಿನ ದಿನಗಳಲ್ಲಿ ಪ್ರತಿಭಟನೆಯ ಹಾದಿ ಯಾವ ಪ್ರತಿರೂಪ ಪಡೆಯುವುದೋ ಎಂದು ಕಾದು ನೋಡಬೇಕು.
|