ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳೂ ಮಧ್ಯಂತರ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಯಾವಾಗ ನಡೆಯುತ್ತದೆ ಎಂಬುದು ಈಗ ಚರ್ಚಾ ವಿಷಯವಾಗಿದೆ.
ಮುಂದಿನ ವಾರ ವಿಧಾನಸಭೆ ರದ್ದುಗೊಳ್ಳಲಿದ್ದು, ಮುಂದಿನ ಏಪ್ರಿಲ್‌ನಲ್ಲಿ ಚುನಾವಣೆ ನಡೆಸಲು ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಲಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಮೂಲಗಳು ತಿಳಿಸಿವೆ.
ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಬೀದಿಯಲ್ಲಿ ಕಾದಾಡುತ್ತಿರುವುದನ್ನು ಗಮನಿಸಿದ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವ ಬದಲು ಚುನಾವಣೆಗೆ ಹೋಗುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದಿದೆ.
ಜೆಡಿಎಸ್ ನೊಂದಿಗೆ ಮೈತ್ರಿಗೆ ಮುಂದಾಗಿ ಸರ್ಕಾರ ರಚನೆ ಯಾದರೂ ಅದು ಹೆಚ್ಚು ಕಾಲ ಬಾಳುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಮುಖಂಡರು ಪಕ್ಷದ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಪಕ್ಷದ ಮತ್ತೊಂದು ವರ್ಗದ ನಾಯಕರು ಸರ್ಕಾರ ರಚನೆಗೆ ಒಲವು ತೋರುತ್ತಿದ್ದರೂ ಅವರ ಸಂಖ್ಯೆ ಹೆಚ್ಚಿಲ್ಲ ಎಂದು ಹೇಳಲಾಗಿದೆ.
ದೇವೇಗೌಡರು ದೆಹಲಿಗೆ ತೆರಳಿ ಸರ್ಕಾರ ರಚನೆಗೆ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಪಕ್ಷದ ವರಿಷ್ಠರು ತಮ್ಮನ್ನು ಕತ್ತಲಲ್ಲಿ ಇಟ್ಟಿರುವುದರ ಬಗ್ಗೆ ಕೆಲ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ರಾಜ್ಯದ ನಾಯಕರಿಗೆ ತಿಳಿಸುವಂತಹ ಮಹತ್ವದ ಬೆಳವಣಿಗೆ ನಡೆದಿಲ್ಲ ಎಂದು ಕೆಲ ನಾಯಕರು ಹೇಳುತ್ತಿದ್ದಾರೆ.
|