ಸುದೀರ್ಘ ಕಾಲದಿಂದ ಲಾಬಿಗಳ ರಾಜಕೀಯದಿಂದಾಗಿ ನನೆಗುದಿಗೆ ಬಿದ್ದಿದ್ದ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಕನಸು ನನಸಾಗಲಿದ್ದು, ಡಿಸೆಂಬರ್ 8ರಿಂದ ಮಂಗಳೂರು-ಯಶವಂತಪುರ ಪ್ರಯಾಣಿಕ ರೈಲು ಸೇವೆ ಆರಂಭವಾಗಲಿದೆ. ಆದರೆ ಇದು ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಯೋಜನೆ.
ಕೇಂದ್ರ ರೈಲ್ವೇಯ ಈ ಯೋಜನೆಗೆ ಕೇಂದ್ರ ರೈಲ್ವೇ ಸಚಿವ ಲಾಲು ಪ್ರಸಾದ್ ಯಾದವ್ ಅವರು ಮಂಗಳೂರು ರೈಲು ನಿಲ್ದಾಣದಿಂದ ಚಾಲನೆ ನೀಡಲಿದ್ದಾರೆ.
ಈ ರೈಲು ಮೈಸೂರು ಮೂಲಕ ಹಾದುಹೋಗಲಿರುವುದು ಹಲವರ ಹುಬ್ಬೇರಿಸಲು ಕಾರಣವಾಗಿದೆ. ಮಾತ್ರವಲ್ಲದೆ ರೈಲು ಯಾನಕ್ಕೆ ತಗುಲುವ ಅವಧಿ ಕೂಡ ಅಸಮಾಧಾನಕ್ಕೆ ಕಾರಣವಾಗಿದೆ.
ರೈಲುಗಾಡಿ ಸಂಖ್ಯೆ 6517 ಯಶವಂತಪುರದಿಂದ ರಾತ್ರಿ 8.35ಕ್ಕೆ ಬಿಟ್ಟು, ಮಂಗಳೂರಿಗೆ ಮರುದಿನ ಬೆಳಿಗ್ಗೆ 7.40ಕ್ಕೆ ತಲುಪಲಿದ್ದರೆ, ಮಂಗಳೂರಿನಿಂದ ರಾತ್ರಿ 7.45ಕ್ಕೆ ಬಿಡುವ ರೈಲು ಮರುದಿನ ಬೆಳಿಗ್ಗೆ 7.40ಕ್ಕೆ ಬೆಂಗಳೂರು ಸೇರಲಿದೆ.
ರೈಲು ಸೇವೆ ಆರಂಭವಾಗಿರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನತೆ ನಿಟ್ಟುಸಿರುಬಿಡಲು ಕಾರಣವಾಗಿದೆಯಾದರೂ, ಮಂಗಳೂರು-ಬೆಂಗಳೂರು ಮಧ್ಯೆ ಇಷ್ಟು ಸುದೀರ್ಘ ಅವಧಿ ಪ್ರಯಾಣಿಸಬೇಕಿರುವುದು ಮಾತ್ರ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿಬಿಟ್ಟಿದೆ.
ಬಸ್ಸಿನಲ್ಲಾದರೆ 8-9 ಗಂಟೆಗಳಲ್ಲೇ ಮಂಗಳೂರು-ಬೆಂಗಳೂರು ಮಧ್ಯೆ ಪ್ರಯಾಣಿಸಬಹುದಾಗಿದ್ದರೆ, ಈ ರೈಲು ಸರಿಸುಮಾರು 12 ಗಂಟೆ ತೆಗೆದುಕೊಳ್ಳುವುದೇಕೆಂಬುದು ಜನತೆಗಿನ್ನೂ ಅರ್ಥವಾಗದ ಸಂಗತಿ. ಆದರೂ ಹೊಂಡ ಗುಂಡಿಗಳಿಂದ ಗಬ್ಬೆದ್ದು ಹೋಗಿರುವ ಶಿರಾಡಿ ಘಾಟಿ ರಸ್ತೆಯಲ್ಲಿ ಪ್ರಯಾಣಿಸುವುದಕ್ಕಿಂತ ಇದು ವಾಸಿ ಎನ್ನುವುದು ಆ ಭಾಗದ ಜನತೆಯ ಅಂಬೋಣ.
|