ಬಳ್ಳಾರಿ ಗಣಿ ರೆಡ್ಡಿ ಮಾಡಿದ ಗಣಿ ಲಂಚ ಆರೋಪವೇ ಬಿಜೆಪಿಗೆ ಮುಳುವಾಯಿತೇನೊ ಎಂಬ ಅಭಿಪ್ರಾಯವಿರುವಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಗಣಿ ಆರೋಪದ ಸರದಿ ಕಾಂಗ್ರೆಸ್ ಪಕ್ಷದ್ದಾಗಿದೆ.
ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಅಧಿಕಾರಿಗಳ ದುರುಪಯೋಗ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಜೆಡಿಎಸ್ ಮುಖಂಡರಿಗೆ ನೂರಾರು ಎಕರೆ ಜಮೀನನ್ನು ಗಣಿ ಗುತ್ತಿಗೆ ನೀಡಿರುವುದು, ಹಾಸನ ಜಿಲ್ಲೆ ಶ್ರೀರಾಮದೇವರ ಕಟ್ಟೆ ಅಣೆಕಟ್ಟೆಯ ಟೆಂಡರ್ ಮೊತ್ತವನ್ನು 170 ಕೋಟಿಯಿಂದ 270 ಕೋಟಿ ರೂ.ಗಳಿಗೆ ಹೆಚ್ಚಿಸಿರುವ ಕುರಿತು ಪುನರ್ ಪರೀಶೀಲನೆ ನಡೆಸುವಂತೆ ಕಾಂಗ್ರೆಸ್ ಪಕ್ಷ ರಾಜ್ಯಪಾಲರಿಗೆ ಮನವಿ ಮಾಡಲು ತೀರ್ಮಾನಿಸಿದೆ.
ಕುಮಾರಸ್ವಾಮಿ ಅವರ ಅಧಿಕಾರದ ಅಂತ್ಯದ ವೇಳೆ ಕೈಗೊಂಡ ತೀರ್ಮಾನಗಳನ್ನು ಸಹಾ ಪರೀಶೀಲಿಸುವಂತೆ ಕಾಂಗ್ರೆಸ್ ಕೋರಲಿದೆ. ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ತಮಗೆ ಬೇಕಾದ ಅಧಿಕಾರಿಗಳನ್ನು ಬೇಕಾದ ಕಡೆ ನೇಮಕ ಮಾಡಿಕೊಂಡಿದ್ದರಿಂದ ಆಡಳಿತ ದುರುಪಯೋಗವಾಗಿದೆ ಎಂದು ಕಾಂಗ್ರೆಸ್ ಮುಖಂಡರು ದೂರಿದ್ದಾರೆ.
ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಪುತ್ರ ಕೆ.ರಾಜೀವ, ಮಾಜಿ ಶಾಸಕರ ಪತ್ನಿ ಕೆ.ಪಿ.ಭಾರತಿದೇವಿ, ಸಿ.ಬಿ.ಸುರೇಶ್ ಬಾಬು ಎಂಬುವವರಿಗೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನೂರಾರು ಎಕರೆ ಗಣಿ ಗುತ್ತಿಗೆ ನೀಡಲಾಗಿದೆ. ಈ ಎಲ್ಲದರ ವಿರುದ್ಧ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ನಿಯೋಗದಲ್ಲಿ ತೆರಳಿ ದೂರು ಸಲ್ಲಿಸಬೇಕು ಎಂದು ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ.
|