ಉಡುಪಿಯಲ್ಲಿ ಮುಂದಿನ ತಿಂಗಳು 12ರಿಂದ 15ವರೆಗೆ ನಡೆಯಲಿರುವ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ದೊರೆತಿದೆ.
ನಾಲ್ಕು ದಿನಗಳ ಕಾಲ ಅದ್ದೂರಿಯಿಂದ ನಡೆಯಲಿರುವ ಸಮ್ಮೇಳನಕ್ಕೆ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅಧ್ಯಕ್ಷರಾಗಿದ್ದು, ಈ ಸಮ್ಮೇಳನದ ಉದ್ಘಾಟನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನೆರವೇರಿಸಲಿದ್ದಾರೆ. ಡಿ. 12ರಂದು ಬೆಳಗ್ಗೆ ಧ್ವಜಾರೋಹಣದ ನಂತರ 9.30ರಿಂದ 12ರವರೆಗೆ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದೆ.
ಸಮ್ಮೇಳನದ ಅಂಗವಾಗಿ ಎರಡು ವೇದಿಕೆಗಳನ್ನು ನಿರ್ಮಿಸಲಾಗಿದೆ. ಶಿವರಾಮ ಕಾರಂತ ಮಹಾಮಂಟಪದಲ್ಲಿ ಗೋಪಾಲಕೃಷ್ಣ ಅಡಿಗ ಪ್ರಧಾನ ವೇದಿಕೆ ಮತ್ತು ಮುದ್ದಣ ಮಂಟಪದಲ್ಲಿ ಮಾಧವ ವೇದಿಕೆ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಚುನಾಯಿತ ಪ್ರತಿನಿಧಿಗಳ ಸರ್ಕಾರ ಇಲ್ಲದಿರುವುದರಿಂದ ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣಿಗಳ ಉಪಸ್ಥಿತಿ ಕಡಿಮೆ ಯಾಗಲಿದೆ.
ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ಪಾಲ್ಗೊಳ್ಳಲಿದ್ದು, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಧರ್ಮಸಿಂಗ್, ಬಿ.ಎಸ್.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್, ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದ ಅಂಗವಾಗಿ ಪ್ರಮುಖ ವಿಷಯಗಳ ಆಧಾರದಮೇಲೆ ಒಟ್ಟು 13 ಗೋಷ್ಠಿಗಳನ್ನು ಆಯೋಜಿಸಲಾಗಿದೆ.
|