ಅತಿವೃಷ್ಟಿಯಾದಾಗಲೆಲ್ಲಾ ಆ ವರ್ಷ ಚಳಿಯೂ ಹೆಚ್ಚಾಗುತ್ತದೆ ಎಂಬ ಮಾತು ನಿಜವೆಂಬಂತೆ ಭಾರಿ ಮಳೆಯಿಂದ ತತ್ತರಿಸಿದ ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯ ಬಹುತೇಕ ಭಾಗದ ಜನ ಈ ವಿಪರೀತ ಚಳಿಯಿಂದ ನಡುಗುತ್ತಿದ್ದಾರೆ.
ಇನ್ನೂ ಮೂರ್ನಾಲ್ಕು ದಿನ ಇದೇ ರೀತಿಯ ಚಳಿ ಮುಂದುವರೆಯುವ ಸಂಭವವಿದೆ, ಇನ್ನೆರಡು ದಿನ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಮಲೆನಾಡಿನಲ್ಲಿ ಎಷ್ಟು ಕಂಬಳ ಹೊದ್ದುಕೊಂಡರೂ ಚಳಿಗೆ ಸಾಕಾಗುತ್ತಿಲ್ಲ. ಬಿಜಾಪುರ ನಗರದಲ್ಲಿ ತಾಪಮಾನದ ಪ್ರಮಾಣ 5.6 ಡಿಗ್ರಿ ಸೆಲ್ಷಿಯಸ್ಗೆ ಇಳಿದಿದ್ದು, ದಾಖಲೆಯಾಗಿದೆ.
ಬೆಳಗಾವಿಯ ತಾಪಮಾನದಲ್ಲೂ ಭಾರಿ ಕುಸಿತ ಉಂಟಾಗಿದೆ. ಅಲ್ಲಿ ಕನಿಷ್ಠ ತಾಪಮಾನ 9.4 ಡಿಗ್ರಿ ಸೆಲ್ಷಿಯಸ್ಗೆ ಇಳಿದಿದೆ. ಬಾಗಲಕೋಟೆಯಲ್ಲೂ ಕನಿಷ್ಠ ತಾಪಮಾನ 10.5 ಡಿಗ್ರಿ ಸೆಲ್ಷಿಯಸ್ ಇಳಿದಿದೆ.
ಧಾರವಾಡ, ಚಿತ್ರದುರ್ಗ, ಚಿಂತಾಮಣಿ, ಗುಲ್ಬರ್ಗಾ ಹಾಗೂ ಗದಗದಲ್ಲಿ 10 ರಿಂದ 11 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಉತ್ತರ ಕನ್ನಡದ ಕಾರವಾರ, ಹೊನ್ನಾವರ, ಯೆಲ್ಲಾಪುರ, ಶಿರಸಿ, ಸಿದ್ದಾಪುರಗಳಲ್ಲಿ ಮೈಮರಗಟ್ಟಿಸುವಷ್ಟು ಚಳಿ ಇದೆ.
|