ಎಂ.ಪಿ.ಪ್ರಕಾಶ್ ನೇತೃತ್ವದಲ್ಲಿ ನಡೆಯಲಿರುವ ಸಭೆಯ ನಿರ್ಧಾರಗಳನ್ನು ಆಧರಿಸಿ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಜೆಡಿಎಸ್ ರಾಜ್ಯಧ್ಯಕ್ಷ ಮೆರಾಜುದ್ದೀನ್ ಪಟೇಲ್ ಎಚ್ಚರಿಕೆ ನೀಡಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್ ಅವರು ಮೊದಲು ಶಿಸ್ತು ಸಮಿತಿ ಅದರ ಬಗ್ಗೆ ಚರ್ಚೆ ನಡೆಸಿ ನಂತರ ನೋಟಿಸ್ ಕಳುಹಿಸಬೇಕಾಗಿದೆ. ಆದರೆ ತಮಗೆ ಈವರೆಗೆ ಯಾವ ನೋಟಿಸ್ ಬಂದಿಲ್ಲ ಎಂದು ಹೇಳಿದ್ದಾರೆ.
ಯಡಿಯೂರಪ್ಪ ನೇತೃತ್ವದ ಏಳು ದಿನಗಳ ಸರ್ಕಾರದ ಪತನದ ನಂತರ ಜೆಡಿಎಸ್ನಲ್ಲಿ ಭುಗಿಲೆದ್ದಿರುವ ಆಂತರಿಕ ತಿಕ್ಕಾಟ ಮತ್ತಷ್ಟು ತೀವ್ರಗೊಂಡಿದೆ. ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆಗೆ ಪ್ರಯತ್ನಿಸಿದ್ದ ಜೆಡಿಎಸ್ ಹಿರಿಯ ಮುಖಂಡ ಎಂ.ಪಿ.ಪ್ರಕಾಶ್ ಈ ತಿಂಗಳ 29ರಂದು ನಡೆಯಲಿರುವ ಪಕ್ಷದ ಕಾರ್ಯಕಾರಿಣಿಯಲ್ಲಿ ತಾವು ಹಾಗೂ ಸಮಾನ ಮನಸ್ಕರು (ಇಲ್ಲಿ ಭಿನ್ನವ್ಮತೀಯರು ಎಂದು ಅರ್ಥೈಸಿಕೊಳ್ಳಬೇಕಾಗಿದೆ) ಭಾಗವಹಿಸುವುದಿಲ್ಲ ಎಂದು ಹೇಳುವುದರೊಂದಿಗೆ ಪಕ್ಷ ಒಡಕಿನ ಹಾದಿಯಲ್ಲಿ ಸಾಗುತ್ತಿರುವುದು ನಿಚ್ಚಳವಾಗಿದೆ. ಅದಕ್ಕೆ ತಲೆ ಕೆಡಿಸಿಕೊಳ್ಳದ ಪಕ್ಷದ ವರಿಷ್ಠ ದೇವೇಗೌಡ, ಯಾರು ಬರಲಿ, ಬಿಡಲಿ ಪೂರ್ವನಿಗದಿಯಂತೆ 29ರಂದು ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದಿದ್ದಾರೆ. ಕಾರ್ಯಕಾರಿ ಸಭೆ ಕರೆದಿರುವುದು ಏಕಪಕ್ಷೀಯ ನಿರ್ಧಾರ ಎಂಬುದು ಪ್ರಕಾಶ್ ಅವರ ಅಭಿಮತವಾಗಿದೆ. 29ಕ್ಕೂ ಮೊದಲು ತಾವು ಸಮಾನ ಮನಸ್ಕರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ತಮ್ಮ ಬೆಂಬಲಕ್ಕೆ 20ರಿಂದ 25 ಶಾಸಕರಿದ್ದಾರೆ ಎಂದು ಅವರು ಹೇಳಿದ್ದಾರೆ.
ಯಾವ ಪಕ್ಷದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸಾಧ್ಯವಿಲ್ಲವೋ ಆ ಪಕ್ಷದಲ್ಲಿ ಮುಂದುವರೆಯುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದ್ದಾರೆ.
ಪಕ್ಷಕ್ಕೆ ರಾಜಕೀಯ ವ್ಯವಹಾರಗಳ ಸಮಿತಿ ಇದೆ. ಮೊದಲು ಈ ಸಮಿತಿ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿ ನಂತರ ಕಾರ್ಯಕಾರಿ ಸಭೆಯನ್ನು ಆಯೋಜಿಸಬೇಕಾಗಿದೆ.
ಆದರೆ ತಮ್ಮ ಪಕ್ಷದಲ್ಲಿ ಅದಾವುದೂ ನಡೆದಿಲ್ಲ ಎಂದು ಪ್ರಕಾಶ್ ನುಡಿದಿದ್ದಾರೆ. ಹೊಸ ಪ್ರಾದೇಶಿಕ ಪಕ್ಷ ರಚನೆ ಸಾಧ್ಯತೆಯನ್ನು ತಳ್ಳಿಹಾಕಿದ ಅವರು ಜನತಾಪರಿವಾರ ಈ ವರೆಗೆ 13ಬಾರಿ ಒಡೆದಿದೆ. ಪ್ರತಿಬಾರಿಯೂ ಪಕ್ಷ ಹೊಸ ರೂಪ ತಾಳಿದೆ ಎಂದು ಹೇಳುವ ಮೂಲಕ ಹೊಸ ಪಕ್ಷ ರಚನೆ ಕುರಿತ ಊಹಾಪೋಹಗಳಿಗೆ ವಿರಾಮ ಹಾಕಿದ್ದಾರೆ.
|