ಜೆಡಿಎಸ್ ಭದ್ರಕೋಟೆ ಎನಿಸಿರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಬಿಜೆಪಿ ಸೋಮವಾರದಿಂದ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಂಡಿದೆ.
ಮುಂದಿನ ಚುನಾವಣೆ ವೇಳೆಗೆ ಪಕ್ಷದ ಸಂಘಟನೆಯನ್ನು ಬಲಪಡಿಸುವ ಮೂಲಕ ಈ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಗೆಲ್ಲುವುದು ಪಕ್ಷದ ಮುಖಂಡರ ಆಶಯವಾಗಿದೆ.
ಏಳು ದಿನಗಳ ಸರ್ಕಾರ ಪತನಗೊಳಿಸಿದ ಜೆಡಿಎಸ್ ಮುಖಂಡರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ವಿರುದ್ಧ ಪ್ರಚಾರದಲ್ಲಿ ತೊಡಗಲಿರುವ ಬಿಜೆಪಿ ಮುಖಂಡರು ಸೋಮವಾರ ಬೆಳಗ್ಗೆ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಾಸ್ಥಾನದಲ್ಲಿ ಪೂಜೆ ನೆರವೇರಿಸುವ ಮೂಲಕ ಜನಜಾಗೃತಿ ಯಾತ್ರೆಗೆ ಚಾಲನೆ ನೀಡಿದ್ದಾರೆ.
ರಾಜ್ಯದಲಿ ಎರಡನೇ ದೊಡ್ಡ ಜನಾಂಗವಾದ ಒಕ್ಕಲಿಗ ಮತದಾರರನ್ನು ತನ್ನತ್ತ ಸೆಳೆಯಲು ಈ ಮೈಸೂರು ಪ್ರಾಂತ್ಯದಲ್ಲಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅನೇಕ ಶಾಸಕರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಮೊದಲು ಅನಂತಕುಮಾರ್ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದ್ದರೂ ಇಂದು ಯಾತ್ರೆ ಪ್ರಾರಂಭವಾದಾಗ ಅವರು ಭಾಗವಹಿಸಿರಲಿಲ್ಲ.
|