ಜೆಡಿಎಸ್-ಬಿಜೆಪಿ ಮರುಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದವರೆಂದೇ ಬಿಂಬಿಸಲ್ಪಟ್ಟ ಮಾಜಿ ಸಚಿವ ಚಲುವರಾಯ ಸ್ವಾಮಿಯವರನ್ನು ಪಕ್ಷದಿಂದ ಅಮಾನತುಗೊಳಿಸುವ ಬಗ್ಗೆ ಈ ತಿಂಗಳ 29 ರಂದು ಜೆಡಿಎಸ್ ನಾಯಕರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದೆಂದು ತಿಳಿದುಬಂದಿದೆ.
ಪ್ರಸಕ್ತ ರಾಜಕೀಯ ವಿದ್ಯಮಾನಗಳಿಂದ ಬೇಸತ್ತು ರಾಜಕೀಯದಿಂದ ನಿವೃತ್ತಿಯಾಗುವ ನಿಟ್ಟಿನಲ್ಲಿ ತಾವು ಯೋಚಿಸುತ್ತಿರುವುದಾಗಿ ಚಲುವರಾಯ ಸ್ವಾಮಿಯವರು ಮಾಧ್ಯಮದವರ ಮುಂದೆ ಹೇಳಿರುವುದು ಗೌಡರನ್ನು ಕೆರಳಿಸಿದೆ ಎಂದು ತಿಳಿದುಬಂದಿದೆ.
ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವ ನಿರ್ಧಾರ ಕೈಗೊಂಡ ದೇವೇಗೌಡ ಹಾಗೂ ಕುಮಾರಸ್ವಾಮಿಯವರ ನಡವಳಿಕೆಯಿಂದ ಚಲುವರಾಯಸ್ವಾಮಿ ಬೇಸತ್ತಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು, ಶಾಸಕ ಬಾಲಕೃಷ್ಣ ಹಾಗೂ ಮತ್ತಿತರ ಬೆಂಬಲಿಗರು ಜೆಡಿಎಸ್‌ಗೆ ವಿದಾಯ ಹೇಳಿ ಬಿಜೆಪಿಗೆ ಸೇರಲಿದ್ದಾರೆ ಎಂಬ ವಿಷಯ ರಾಜಕೀಯ ವಲಯಗಳಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರ ಮುಂದಿನ ನಡೆಯನ್ನು ಎಲ್ಲರೂ ಎದುರುನೋಡುವಂತಾಗಿದೆ.
|