ದೇಶದ ಪ್ರಮುಖ ನಗರಗಳಲ್ಲಿ ದಾಳಿ ಮಾಡುವುದಾಗಿ ಉಗ್ರರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಇನ್ನೂ ಹೆಚ್ಚಿನ ಬಿಗಿಭದ್ರತೆ ಒದಗಿಸುವ ಯೋಜನೆ ಸದ್ಯದಲ್ಲಿಯೇ ಅನುಷ್ಠಾನಗೊಳ್ಳಲಿದೆ.
ಇದರನ್ವಯ ವಿಧಾನಸೌಧ ಹಾಗೂ ವಿಕಾಸಸೌಧ ಪ್ರವೇಶಿಸುವ ಸಾರ್ವಜನಿಕರಿಗಾಗಿ ಗೋಪಾಲಗೌಡ ವೃತ್ತದ ಸಮೀಪ ಹಾಗೂ ಶಾಸಕರ ಭವನದ ಕಡೆಯ ಪ್ರವೇಶ ಸ್ವಾರಗಳಲ್ಲಿ ಎರಡು ಪ್ರತ್ಯೇಕ ಸ್ವಾಗತ ಕೇಂದ್ರಗಳನ್ನು ಸ್ಥಾಪಿಸಿ, ಕಂಪ್ಯೂಟರುಗಳನ್ನು ಅಳವಡಿಸಲಾಗುವುದು.
ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಸೌಧಗಳನ್ನು ಪ್ರವೇಶಿಸಲು ಈ ಕೇಂದ್ರದ ಮೂಲಕ ಅನುವು ಮಾಡಿಕೊಡಲಾಗುವುದು ಎಂದು ತಿಳಿದುಬಂದಿದೆ. ಭೇಟಿ ಮಾಡಬಯಸುವವರ ಭಾವಚಿತ್ರ, ಯಾರನ್ನು ಭೇಟಿಯಾಗಲು ಬಂದಿದ್ದಾರೆ, ಇಲಾಖೆ ಯಾವುದು ಇವೇ ಮೊದಲಾದ ವಿವರಗಳನ್ನು ಆ ಚೀಟಿಯಲ್ಲಿ ನಮೂದಿಸಲಾಗುತ್ತದೆ ಎಂದೂ ತಿಳಿದುಬಂದಿದೆ.
ಇದಕ್ಕೆ ಸಂಬಂಧಪಟ್ಟಂತೆ ಅಗತ್ಯವಿರುವ ಸಾಫ್ಟ್‌ವೇರ್ ರೂಪಿಸುವುದಕ್ಕಾಗಿ ಈಗಾಗಲೇ 3 ಸಾಫ್ಟ್‌ವೇರ್ ಕಂಪನಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಅವುಗಳ ಅರ್ಜಿಗಳು ಇತ್ಯರ್ಥವಾಗಬೇಕಿವೆ ಎಂದು ತಿಳಿದುಬಂದಿದೆ.
|