ಜೆಡಿಎಸ್ ಪಕ್ಷದ ನಾಯಕ ಎಂ.ಪಿ.ಪ್ರಕಾಶ್ ಆಯೋಜಿಸಿರುವ ಪರ್ಯಾಯ ಸಭೆಯ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ವರಿಷ್ಠ ದೇವೇಗೌಡ ತಮಗೆ ಅದರಿಂದ ಯಾವುದೇ ಚಿಂತೆಯಿಲ್ಲವೆಂದು ಹೇಳಿದ್ದಾರೆ. ಪಕ್ಷವನ್ನು ತೊರೆದು ಹೋಗಬಯಸುವವರೆಲ್ಲ ಹೋಗಬಹುದು ಎಂದು ಖಾರವಾಗಿ ನುಡಿದಿದ್ದಾರೆ.
ಪಕ್ಷವನ್ನು ಕಟ್ಟಿಬೆಳೆಸುವ ಸಾಮರ್ಥ್ಯ ತಮಗಿರುವುದಾಗಿ ಹೇಳಿರುವ ಅವರು, ಪಕ್ಷವನ್ನು ಸ್ವಯಂಇಚ್ಛೆಯಿಂದ ತೊರೆದು ಹೋಗುವವರು ಧಾರಾಳವಾಗಿ ಹೋಗಬಹುದು ಎಂದು ನುಡಿಯುವ ಮೂಲಕ ಪಕ್ಷಕ್ಕೆ ಯಾರೂ ಅನಿವಾರ್ಯರಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ.
ಏತನ್ಮಧ್ಯೆ, ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಕಾರ್ಯನಿರ್ವಹಣೆ ಶೈಲಿ ಬಗ್ಗೆ ಅತೃಪ್ತರಾಗಿರುವ ಜೆಡಿಎಸ್‌ನ ಸುಮಾರು 30 ಶಾಸಕರು ಮಾಜಿ ಗೃಹ ಸಚಿವ ಎಂ.ಪಿ. ಪ್ರಕಾಶ್ ಬುಧವಾರ ಕರೆದಿರುವ ಪರ್ಯಾಯಸಭೆಯಲ್ಲಿ ಭಾಗವಹಿಸುವ ಸಂಭವವಿದೆ.
ತಾವು ಕರೆದಿರುವ ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಪ್ರಕಾಶ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನ.29ರಂದು ಜೆಡಿಎಸ್‌ನ ಕಾರ್ಯನಿರ್ವಾಹಕ ಸಮಿತಿ ಸಭೆ ನಡೆಯುವುದರಿಂದ ಇಂತಹ ಸಭೆ ನಡೆಸುವ ಅಗತ್ಯವನ್ನು ಸಮರ್ಥಿಸಿಕೊಂಡರು.
ಪಕ್ಷದ ವ್ಯವಹಾರಗಳನ್ನು ಸರ್ವಾಧಿಕಾರದ ರೀತಿಯಲ್ಲಿ ನಡೆಸುತ್ತಿರುವ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಟೀಕಿಸಿದ ಪ್ರಕಾಶ್ ನಾಳೆಯ ಸಭೆಯಲ್ಲಿ ಭಾಗವಹಿಸುವವರೆಲ್ಲ ಗುರುವಾರದ ಸಭೆಯಲ್ಲಿ ಪಾಲ್ಗೊಳ್ಳಬಾರದೆಂಬ ಷರತ್ತು ವಿಧಿಸಿದರು.
ಪಕ್ಷವು ಅಧಿಕಾರ ಹಸ್ತಾಂತರ ವಿಷಯವನ್ನು ನಿಭಾಯಿಸಿದ್ದು ಮತ್ತು ತರುವಾಯ ಯಡಿಯೂರಪ್ಪ ಸರ್ಕಾರಕ್ಕೆ ಬೆಂಬಲ ಹಿಂತೆಗೆತಕ್ಕೆ ನಿರ್ಧರಿಸಿದ ರೀತಿಯ ಬಗ್ಗೆ ಪಕ್ಷದ ಸಮಾನಮನಸ್ಕ ಶಾಸಕರು ಅಸಮಾಧಾನ ತಾಳಿದ್ದಾರೆಂದು ಅವರು ಹೇಳಿದರು.
ದೇವೇಗೌಡ ಮತ್ತು ಕುಮಾರಸ್ವಾಮಿ ತೆಗೆದುಕೊಂಡ ಕೆಲವು ಏಕಪಕ್ಷೀಯ ನಿರ್ಧಾರಗಳಿಂದ ಜೆಡಿಎಸ್ ವರ್ಚಸ್ಸಿಗೆ ಕಳಂಕ ಉಂಟಾಗಿದೆಯೆಂದು ತಿಳಿಸಿದ ಅವರು, ನಾಳೆಯಲ್ಲಿ ಸಭೆಯಲ್ಲಿ ಎಲ್ಲ ಪ್ರಸ್ತುತ ವಿಷಯಗಳನ್ನು ಚರ್ಚಿಸಲಾಗುವುದು ಎಂದು ನುಡಿದರು. ಪರ್ಯಾಯ ಸಭೆ ನಡೆಸುವುದರಿಂದ ಜೆಡಿಎಸ್‌ನಲ್ಲಿ ಒಡಕು ಉಂಟಾಗುವುದೆಂಬ ವಿಷಯವನ್ನು ಅವರು ಅಲ್ಲಗಳೆದರು. ದೇವೇಗೌಡರ ನಾಯಕತ್ವದಲ್ಲಿ ತಮಗೆ ಇನ್ನೂ ನಂಬಿಕೆಯಿದೆಯೆಂದು ಹೇಳಿದರು. ಪಕ್ಷವನ್ನು ಒಡೆಯುವ ಕೆಲಸವನ್ನು ತಾವು ಮಾಡುವುದಿಲ್ಲ ಎಂದೂ ಅವರು ನುಡಿದರು.
|