ಜೆಡಿಎಸ್ ವರಿಷ್ಠರ ನಿರ್ಧಾರಗಳಿಂದ ಅಸಮಾಧಾನಗೊಂಡು ಬಂಡಾಯವೆದ್ದಿರುವ ಶಾಸಕರು, ನಾಯಕರು ಪಕ್ಷದ ಹಿರಿಯ ಮುಖಂಡ ಎಂ.ಪಿ.ಪ್ರಕಾಶ್ ಅವರ ನೇತೃತ್ವದಲ್ಲಿ ಬುಧವಾರ ಬೆಂಗಳೂರಿನಲ್ಲಿ ಸಭೆ ಸೇರಲಿದ್ದಾರೆ.
ಎಲ್ಲ ವಿಷಯಗಳ ಕುರಿತು ಸಮಾಲೋಚನೆ ನಡೆಸಿ ನಂತರ ಹುಬ್ಬಳ್ಳಿ ಅಥವಾ ದಾವಣಗೆರೆಯಲ್ಲಿ ಡಿಸೆಂಬರ್ ಅಂತ್ಯಕ್ಕೆ ನಡೆಯುವ ಸಭೆಯಲ್ಲಿ ಭಿನ್ನಮತೀಯರು ತಮ್ಮ ನಿರ್ಧಾರ ತಿಳಿಸಲಿದ್ದಾರೆ.
ತಮ್ಮ ಜೊತೆ 25ರಿಂದ 30 ಜನ ಶಾಸಕರಿದ್ದಾರೆ ಎಂದು ಎಂ.ಪಿ.ಪ್ರಕಾಶ್ ಹೇಳಿದ್ದಾರೆ. ಶಾಸಕರು, ಮಾಜಿ ಶಾಸಕರು, ಪಕ್ಷದ ಮುಖಂಡರು, ಜಿಲ್ಲಾ ಪಂಚಾಯತಿ ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಿಸಿದ್ದಾರೆ.
ಬೆಂಗಳೂರಿನಲ್ಲಿ ದೇವೇಗೌಡರು ಕರೆದಿರುವ ಜೆಡಿಎಸ್ ಕಾರ್ಯಕಾರಿಣಿ ಸಭೆ ಏಕಪಕ್ಷೀಯ ನಿರ್ಧಾರವಾಗಿದ್ದು, ಅಂತಹ ಸಭೆಯಲ್ಲಿ ತಾವು ಭಾಗವಹಿಸುವುದರಿಂದ ಅರ್ಥಪೂರ್ಣ ಚರ್ಚೆ ನಡೆಯುವುದಿಲ್ಲ, ಪಕ್ಷದ ರಾಜಕೀಯ ನಿರ್ಧಾರಗಳು ಮೊದಲಿಗೆ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ನಿರ್ಧಾರವಾಗಬೇಕು, ಆದರೆ ಅಂತಹ ಯಾವ ಪ್ರಯತ್ನವೂ ನಡೆಯದಿರುವುದರಿಂದ ತಾವು ಈ ಸಭೆಗೆ ಹಾಜರಾಗುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಅವರು ಎಂ.ಪಿ.ಪ್ರಕಾಶ್ ಅವರ ಮೇಲೆ ಕ್ರಮ ಕೈಗೊಳ್ಳುವ ವಿಚಾರವನ್ನು ವರಿಷ್ಠರ ನಿರ್ಧಾರಕ್ಕೆ ಬಿಡಲಾಗುವುದು ಎಂದಿದ್ದಾರೆ.
|