ಕೆಲವು ನದಿಗಳು, ಸಾಹಿತಿಗಳು, ಧರ್ಮದ ಹೆಸರು ಸೇರಿಸಿದರೆ ಅದು ನಾಡಗೀತೆಯೇ ಎಂದು ವಿಮರ್ಶಕ ಡಾ.ಎಂ.ಎ.ಕಲಬುರ್ಗಿ ಪ್ರಶ್ನಿಸಿರುವುದು ಸರಿಯಲ್ಲ ಎಂದು ಹಿರಿಯ ಸಾಹಿತಿ ಪ್ರೊ.ದೇಜಗೌ ಕಿಡಿಕಾರುವುದರೊಂದಿಗೆ ನಾಡಗೀತೆಗೆ ಸಂಬಂಧಿಸಿ ಮತ್ತೊಂದು ವಿವಾದ ಸೃಷ್ಟಿಯಾದಂತಿದೆ.
ಅಂತಾರಾಷ್ಟ್ತ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ರಾಷ್ಟ್ತ್ರಗೀತೆಕಾರರಾದ ರವೀಂದ್ರನಾಥ ಠ್ಯಾಗೂರ್ ಅವರು ಅನೇಕ ಸ್ಥಳಗಳನ್ನು ಬಿಟ್ಟಿದ್ದಾರೆ ಎಂದು ಆಕ್ಷೇಪಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಕೇಳಿದರು.
ಈ ನಾಡಿನ ಕೆಲ ಬುದ್ದಿಜೀವಿಗಳು, ಕನ್ನಡಕ್ಕೆ ಶಾಸ್ತ್ತ್ರೀಯ ಸ್ಥಾನಮಾನ ದೊರಕಿಸಿಕೊಡಲು ಉಪವಾಸ ಮಾಡುವುದು ನಾಚಿಕೆಗೇಡು ಎಂದು ಕಲಬುರ್ಗಿ ಟೀಕಿಸಿದ್ದಾರೆ. ಆದರೆ ನಾನು ಅವರನ್ನು ಟೀಕಿಸುವುದಿಲ್ಲ, ಯಾಕೆಂದರೆ ಅವರನ್ನು ನೋಡಿ ಕನ್ನಡ ತಾಯಿ ವ್ಯಥೆ ಪಡುತ್ತಿದ್ದಾಳೆ.
ತಮಿಳಿಗೆ ಶಾಸ್ತ್ತ್ರೀಯ ಸ್ಥಾನಮಾನ ನೀಡಲು ಒಪ್ಪಿದ ಸೋನಿಯಾಗಾಂಧಿ ಅವರು ಕನ್ನಡಕ್ಕೆ ಅಂಥ ಅವಕಾಶ ನೀಡದಿರುವುದಕ್ಕೆ ಕನ್ನಡಿಗರ ದೌರ್ಬಲ್ಯವೇ ಕಾರಣ ಎಂದು ಈ ಸಂದರ್ಭದಲ್ಲಿ ದೇಜಗೌ ನೊಂದು ನುಡಿದರು.
|