ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದೇ ಹೇಳಿಕೊಂಡು ಬಂದಿರುವ ಪ್ರಕಾಶ್ ಜೆಡಿಎಸ್‌ಗೆ ದೇವೇಗೌಡರು ಅನಿವಾರ್ಯವಲ್ಲ ಎಂದು ಹೇಳುವ ಮೂಲಕ ಗೌಡರ ವಿರುದ್ಧ ತಮ್ಮ ಸಮರವನ್ನು ಮುಂದುವರೆಸುವ ಸ್ಪಷ್ಟ ಸೂಚನೆ ನೀಡಿದ್ದಾರೆ.
ಜೆಡಿಎಸ್ ಭಿನ್ನಮತ ಬಣದ ನಾಯಕ ಎಂ.ಪಿ.ಪ್ರಕಾಶ್ ನಡೆಸಲು ಉದ್ದೇಶಿಸಿರುವ ಸಮಾನ ಮನಸ್ಕರ ಸಭೆಯನ್ನು ರದ್ದುಗೊಳಿಸಲು ಇಚ್ಛಿಸದ ಕಾರಣ ಜೆಡಿಎಸ್ ಇಬ್ಬಾಗದ ಹೊಸ್ತಿಲಲ್ಲಿದೆ.
ಪ್ರಕಾಶ್ ಅವರ ಮನವೊಲಿಸಲು ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಸಚಿವ ರೇವಣ್ಣ, ವಕ್ತಾರ ವೈ.ಎಸ್.ವಿ. ದತ್ತಾ ಮಂಗಳವಾರ ರಾತ್ರಿ ನಡೆಸಿದ ಸಂಧಾನ ವಿಫಲವಾಗಿದೆ. ನನ್ನ ನಿರ್ಧಾರ ದುಡುಕಿನ ನಿರ್ಧಾರವಲ್ಲ ಎಂದು ದೇವೇಗೌಡರಿಗೆ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಈ ನಡುವೆ ಎಚ್.ಡಿ.ರೇವಣ್ಣ ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಚೆಲುವರಾಯಸ್ವಾಮಿ ಪ್ರಕಾಶ್ ಅವರು ಕರೆದಿರುವ ಸಭೆಗೆ ಹಾಜರಾಗುವುದಾಗಿ ಪ್ರಕಟಿಸಿ ಪ್ರಕಾಶ್ ಬೆಂಬಲಕ್ಕೆ ನಿಂತಿದ್ದಾರೆ.
ಪ್ರಕಾಶ್ ಕರೆದಿರುವ ಸಭೆ ಕಾನೂನು ಬಾಹಿರವಾಗಿದ್ದು, ಅದರಲ್ಲಿ ಪಾಲ್ಗೊಳ್ಳುವವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದೆಂದು ಪಕ್ಷದ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಎಚ್ಚರಿಕೆ ನೀಡಿದ್ದಾರೆ.
ಪ್ರಕಾಶ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗದಿದ್ದರೂ ಪಕ್ಷದ ವರಿಷ್ಠರ ಇತ್ತೀಚಿನ ವರ್ತನೆಗಳ ಬಗ್ಗೆ ಬಹಿರಂಗವಾಗಿ ಹಲವು ಶಾಸಕರು ಹಾಗೂ ಮುಖಂಡರು ಆಕ್ರೋಶ ವ್ಯಕ್ತಪಡಿಸುವುದು ನಿಶ್ಚಿತವಾಗಿದೆ.
|