ಬೆಂಗಳೂರು ನಗರದಲ್ಲಿ ಭೂಮಿ ದರ ಚಿನ್ನದ ದರಕ್ಕಿಂತ ಹೆಚ್ಚು ಎಂಬುದು ತಿಳಿದಿರುವ ವಿಷಯವೇ. ಸರ್ಕಾರದ ನಿರ್ಲಕ್ಷ್ಯದಿಂದಾಗಿ, ಸರ್ಕಾರದ ಜಮೀನನ್ನು ರಕ್ಷಿಸುಕೊಳ್ಳುವಲ್ಲಿ ಅಧಿಕಾರಿಗಳ ಉದಾಸೀನ ವರ್ತನೆಯಿಂದಾಗಿ ಬೆಂಗಳೂರು ಹಾಗೂ ನಗರ ಸುತ್ತಮುತ್ತ ಇರುವ ಸರ್ಕಾರಕ್ಕೆ ಸೇರಿದ 40,000 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ವಿಧಾನಮಂಡಲ ಜಂಟಿ ಸದನ ಸಮಿತಿ ಹೇಳುತ್ತಿದೆ.
ಸಮಿತಿಯ ಅಧ್ಯಕ್ಷರಾಗಿದ್ದ ಎ.ಟಿ.ರಾಮಸ್ವಾಮಿ ಅವರು ಸದ್ಯದಲ್ಲೇ ಸಮಿತಿ ಕಂಡುಕೊಂಡ ಭೂಮಿ ಒತ್ತುವರಿ ಸತ್ಯಾಂಶಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಲು ನಿರ್ಧರಿಸಿದ್ದಾರೆ. ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಳಿಸಿ, ಅತಿಕ್ರಮಣದಾರರ ವಿರುದ್ಧ ಪರಿಣಾಮಕಾರಿ ಅಸ್ತ್ತ್ರ ಬಳಸಬೇಕು ಎಂದು ರಾಜ್ಯಪಾಲರಿಗೆ ರಾಮಸ್ವಾಮಿ ಮನವಿ ಸಲ್ಲಿಸಲಿದ್ದಾರೆ.
ಸಮಿತಿ ಈಗಾಗಲೇ ಎರಡು ಮಧ್ಯಂತರ ವರದಿಗಳನ್ನು ಮಂಡಿಸಿದೆ. ಸಮಿತಿಯು ಯಾವುದೇ ರಾಗದ್ವೇಷಗಳಿಲ್ಲದೆ ಕೆಲಸ ಮಾಡಿದ ತೃಪ್ತಿ ತಮಗಿದೆ ಎಂದು ರಾಮಸ್ವಾಮಿ ತಿಳಿಸಿದ್ದಾರೆ.
ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡ 410 ಮಂದಿ ವಿರುದ್ಧ ಬೆಂಗಳೂರು ನಗರ ಜಿಲ್ಲಾಡಳಿತ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದೆ. ಸಮಿತಿ 17 ತಿಂಗಳಲ್ಲಿ ಕಾರ್ಯ ನಿರ್ವಹಿಸಿ ಒತ್ತುವರಿ ಭೂಮಿಯನ್ನು ಪತ್ತೆ ಮಾಡಿ ಸರ್ಕಾರದ ಖಜಾನೆಗೆ 434.53 ಕೊಟಿ ರೂ.ಗಳು ಹರಿದುಬರುವಂತೆ ಮಾಡಿದೆ.
|