ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಗುರುವಾರ ಕರೆದಿರುವ ಸಭೆಯನ್ನು ಬಹಿಷ್ಕರಿಸಲು ಹಿರಿಯ ನಾಯಕ ಎಂ.ಪಿ.ಪ್ರಕಾಶ್ ನೇತೃತ್ವದ ಜೆಡಿಎಸ್ ಬಂಡಾಯ ಶಾಸಕರ ಬಣ ನಿರ್ಧರಿಸಿದೆ.
ದೇವೇಗೌಡರು ತೆಗೆದುಕೊಂಡ ಕೆಲವು ಏಕಪಕ್ಷೀಯ ನಿಲುವುಗಳಿಂದ ಅವರ ಸರ್ವಾಧಿಕಾರಿ ಧೋರಣೆಗೆ ಬೇಸತ್ತ ಪ್ರಕಾಶ್ ಗೌಡರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಬುಧವಾರ ಎಂ.ಪಿ.ಪ್ರಕಾಶ್ ಕರೆದಿದ್ದ ಬಂಡಾಯ ಶಾಸಕರ ಸಭೆಯಲ್ಲಿ 17 ಎಂಎಲ್ಎಗಳು ಮತ್ತು 3 ಎಂಎಲ್‌ಸಿಗಳು ಭಾಗವಹಿಸಿದ್ದರೆಂದು ಬಂಡಾಯ ಶಾಸಕರ ಬಣ ಹೇಳಿಕೊಂಡಿದೆ.
ಪಕ್ಷದ ವಿಷಯಗಳು ಸೇರಿದಂತೆ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಬುಡಮೇಲು ಮಾಡಲು ಗೌಡರ ಏಕಪಕ್ಷೀಯ ನಿರ್ಧಾರಗಳು ಅವರಿಗೆ ಅಸಾಮಾಧಾನ ತಂದ ಹಿನ್ನೆಲೆಯಲ್ಲಿ ಮುಂದಿನ ಮಾರ್ಗೋಪಾಯಗಳನ್ನು ಚರ್ಚಿಸಲು ಅವರು ಬುಧವಾರದ ಸಭೆ ಕರೆದಿದ್ದರು.
ಗುರುವಾರ ನಡೆಯಲಿರುವ ಸಭೆಗೆ ದೇವೇಗೌಡರು ರಾಜ್ಯ ಘಟಕದ ಪದಾಧಿಕಾರಿಗಳು, ಕಾರ್ಯನಿರ್ವಾಹಕ ಸಮಿತಿ, ಜಿಲ್ಲಾ ಪಂಚಾಯತ್ ಸದಸ್ಯರು ಮತ್ತಿತರ ಹಿರಿಯ ನಾಯಕರ ಸಭೆಯನ್ನು ಕರೆದಿದ್ದು, ಪ್ರಸಕ್ತ ರಾಜಕೀಯ ಸ್ಥಿತಿಗತಿ ಮತ್ತು ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ಬಗ್ಗೆ ಚರ್ಚಿಸಲಿದ್ದಾರೆ. ಪ್ರಕಾಶ್ ಅವರು ಬಂಡಾಯ ಶಾಸಕರ ಸಭೆ ನಡೆಸದಂತೆ ದೇವೇಗೌಡರು ಇಂದು ಸರ್ವಪ್ರಯತ್ನ ಮಾಡಿದರು. ಆದರೆ ಅವರನ್ನು ಸಮಾಧಾನ ಮಾಡುವ ಗೌಡರ ಎಲ್ಲ ಪ್ರಯತ್ನಗಳು ವಿಫಲವಾಗಿ ಬಂಡಾಯ ಶಾಸಕರ ಸಭೆ ನಡೆಯಿತೆಂದು ಹೇಳಲಾಗಿದೆ.
ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತ ಬಂಡಾಯ ಶಾಸಕರ ಸಭೆಗೆ ಮಹತ್ವ ನೀಡದೇ" ರಾಜ್ಯ ವಿಧಾನಸಭೆ ಸದ್ಯದಲ್ಲೇ ವಿಸರ್ಜನೆಯಾಗಲಿದ್ದು, ಶಾಸಕರಿಗೆ ಮಾಡಲು ಯಾವ ಕೆಲಸವೂ ಇಲ್ಲ. ಗುರುವಾರದ ಸಭೆಯಲ್ಲಿ ಚುನಾವಣೆ ಎದುರಿಸುವ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುವುದಾಗಿ" ಅವರು ಹೇಳಿದರು.
|