ರಾಜಕೀಯ ವಿದ್ಯಮಾನಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿವೆ. ಸದ್ಯದಲ್ಲಿಯೇ ಚುನಾವಣೆಗಳು ಘೋಷಣೆಯಾಗಲಿವೆ. ಈ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಜೆಡಿಎಸ್ ಕಾರ್ಯಕಾರಿಣಿ ಸಭೆ ಹೊರಹೊಮ್ಮಿಸಲಿರುವ ತೀರ್ಮಾನಗಳೇನು ಎಂಬುದರೆಡೆಗೆ ರಾಜಕೀಯ ವಲಯ ಕುತೂಹಲದಿಂದ ನೋಡುತ್ತಿದೆ. 11.30 ಗಂಟೆಯ ಸುಮಾರಿಗೆ ಸಭೆ ಆರಂಭವಾಗಲಿದೆ.
ನಿನ್ನೆಯ ಎಂ.ಪಿ.ಪ್ರಕಾಶ್ ನೇತೃತ್ವದ ಸಮಾನ ಮನಸ್ಕರ ಸಭೆಯಲ್ಲಿ ಭಾಗವಹಿಸಿದ್ದ 17 ಎಂ.ಎಲ್.ಎ.ಗಳು ಹಾಗೂ 3 ಎಂ.ಎಲ್.ಸಿ.ಗಳು ಇಂದಿನ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಮೇಲಾಗಿ ಈ ಸಭೆ ಏಕಪಕ್ಷೀಯ ಸಭೆ ಹಾಗೂ ಬಹಿರಂಗ ಸಭೆಯಷ್ಟೇ ಎಂದು ಪ್ರಕಾಶ್ ಪ್ರತಿಕ್ರಿಯಿಸಿರುವ ಹಿನ್ನೆಲೆಯಲ್ಲಿ ಈ ಸಭೆಗೆ ಪ್ರಾಮುಖ್ಯತೆ ಬಂದಿದೆ.
ಇಂದಿನ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ಪಕ್ಷದ ಬಲವರ್ಧನೆಗೆ ಸಹಾಯವಾಗಲಿದೆಯೇ ಅಥವಾ ಮತ್ತೊಮ್ಮೆ ಹೋಳಾಗುವ ಪ್ರಕ್ರಿಯೆಗೆ ಅನುವು ಮಾಡಿಕೊಡಲಿದೆಯೇ ಎಂಬುದರೆಡೆಗೆ ಎಲ್ಲರೂ ಕಾದುನೋಡುವಂತಾಗಿದೆ.
|