ಜೆಡಿಎಸ್‌ನಲ್ಲಿನ ಭಿನ್ನಮತದ ನಂತರ ಈಗ ಬಿಜೆಪಿ ಸರದಿ. ಅಸಮಾಧಾನವನ್ನು ದೆಹಲಿವರೆಗೂ ಕೊಂಡೊಯ್ದಿರುವ ಅದರ ನಾಯಕರ ವರಸೆಯೇ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳುತ್ತದೆ.
ಬಿಜೆಪಿ ನೇತೃತ್ವದ ಸರ್ಕಾರಕ್ಕೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರಿಂದ ಬೆಂಬಲ ಸಿಗದಿದ್ದಾಗ ಸಹಜವಾಗಿಯೇ ಅದಕ್ಕೆ ಅನುಕಂಪ ದೊರೆತಿತ್ತು. ಅದರೆ ಈ ಅನುಕಂಪ ಮುಂಬರುವ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗಬೇಕಾದರೆ ಇಲ್ಲಿನ ನಾಯಕರ ಧೋರಣೆ ಬದಲಾಗಬೇಕು ಎಂಬುದು ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಹಾಗೂ ಡಿ.ಎಚ್.ಶಂಕರಮೂರ್ತಿಯವರು ದೆಹಲಿಯಲ್ಲಿನ ಪಕ್ಷದ ವರಿಷ್ಠರ ಮುಂದೆ ಇಟ್ಟ ಬಿನ್ನಹವಾಗಿತ್ತು.
ಯಡಿಯೂರಪ್ಪ ಎಲ್ಲ ವಿಷಯಗಳಲ್ಲೂ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಪಕ್ಷದ ಅನುಭವಸ್ಥ ಕಾರ್ಯಕರ್ತರ ಬದಲಿಗೆ ಶೋಭಾ ಕರಂದ್ಲಾಜೆಯವರಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿದೆ. ಮೇಲಾಗಿ ಸಾರ್ವಜನಿಕವಾಗಿ ಮಾತನಾಡುವಾಗ ಯಡಿಯೂರಪ್ಪನವರ ನಡವಳಿಕೆಗಳು ಅಸಹನೀಯವಾಗಿರುತ್ತವೆ ಎಂಬ ದೂರುಗಳು ದೆಹಲಿಯ ನಾಯಕರನ್ನು ಮುಟ್ಟಿವೆ.
ಜತೆಗೆ ಪಕ್ಷದ ರಾಜ್ಯಾಧ್ಯಕ್ಷ ಸದಾನಂದ ಗೌಡರು ಯಡಿಯೂರಪ್ಪನವರ ಕೈಗೊಂಬೆಯಂತೆ ವರ್ತಿಸುತ್ತಾರೆ. ಅವರ ಸ್ಥಳದಲ್ಲಿ ಜನಾರ್ಧನ ರೆಡ್ಡಿಯವರನ್ನು ಕೂರಿಸಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದು ಪಕ್ಷದ ಸಂಘಟನೆಯ ದೃಷ್ಟಿಯಿಂದ ಒಳ್ಳೆಯದು ಎಂಬ ಅಭಿಪ್ರಾಯವೂ ಈ ನಾಯಕ ತ್ರಯರಿಂದ ಹೊರಹೊಮ್ಮಿದೆ. ಇವರ ಜತೆಯಲ್ಲಿ ಪಕ್ಷದ ರಾಷ್ಟ್ತ್ರೀಯ ಕಾರ್ಯದರ್ಶಿ ಅನಂತಕುಮಾರ ಅವರೂ ಪೌರೋಹಿತ್ಯ ವಹಿಸಿರುವುದು ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನದ ಹೊಗೆಯನ್ನು ನಿಚ್ಚಳವಾಗಿಸಿದೆ.
ಹೀಗಾಗಿ ದೆಹಲಿಯ ವರಿಷ್ಠರು ಏನು ಕ್ರಮ ಕೈಗೊಳ್ಳುವರು ಎಂಬುದೀಗ ಕುತೂಹಲವನ್ನು ಮೂಡಿಸಿದೆ. ಸದ್ಯದಲ್ಲಿಯೇ ಚುನಾವಣೆಗಳು ಬರಲಿರುವ ಹಿನ್ನೆಲೆಯಲ್ಲಿ ಇದು ಅನಿವಾರ್ಯ ಕೂಡಾ ಎಂಬುದೇ ಭಿನ್ನಮತೀಯರ ಕೂಗು.
|