ಹಲವು ನೀರೀಕ್ಷೆಗಳನ್ನು ಹುಟ್ಟುಹಾಕಿರುವ ಜೆಡಿಎಸ್ ಕಾರ್ಯಕಾರಿಣಿ ಸಭೆ ಆರಂಭಗೊಂಡಿದೆ. ವಾಸ್ತವವಾಗಿ ಕಾರ್ಯಕ್ರಮ ಬೆಳಗ್ಗೆ 11.30ಕ್ಕೆ ಉದ್ಘಾಟನೆಯಾಗಬೇಕಿತ್ತಾದರೂ ಸೂಚನೆಯನುಸಾರ ಪಕ್ಷಕ್ಕೆ ಉತ್ತಮ ಭವಿಷ್ಯ ಸಿಗಲಿ ಎಂಬ ಸದಾಶಯದಿಂದ ಬೆಳಗ್ಗೆ 10.15ಕ್ಕೇ ದೇವೇಗೌಡರಿಂದ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ತದನಂತರ ನೆರೆದಿದ್ದ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಸಲುವಾಗಿ ದೇವೇಗೌಡರು, ಕುಮಾರಸ್ವಾಮಿ ಹಾಗೂ ಮಿರಾಜುದ್ದೀನ್ ನಗಾರಿ ಬಾರಿಸುವ ಮೂಲಕ ಮತ್ತೊಮ್ಮೆ ಉದ್ಘಾಟಿಸಿದ್ದು ವಿಶೇಷವಾಗಿತ್ತು.
ಸಭೆಯ ಪ್ರಾರಂಭದಲ್ಲೇ ತಮ್ಮ ಚುರುಕಿನ-ಸಾಂದರ್ಭಿಕ ಮಾತುಗಳಿಂದ ಎಲ್ಲರ ಮನ ಸೆಳೆದದ್ದು ಪಕ್ಷದ ವಕ್ತಾರ ವೈ.ಎಸ್.ವಿ. ದತ್ತಾ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳನ್ನು ಲಘುವಾಗಿಯೇ ತರಾಟೆಗೆ ತೆಗೆದುಕೊಂಡ ದತ್ತಾ ಪಕ್ಷದ ರಾಷ್ಟ್ತ್ರೀಯ ಅಧ್ಯಕ್ಷ ದೇವೇಗೌಡರನ್ನು ಪ್ರಶ್ನಾತೀತ ನಾಯಕ ಎಂದು ವಿಭಿನ್ನ ಶೈಲಿಯಲ್ಲಿ ಬಿಂಬಿಸಿದರು.
ಜೆಡಿಎಸ್ ಪಕ್ಷದ ವಿರುದ್ಧ ಇದೇ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಕೆಲ ದಿನಗಲ ಹಿಂದೆ ಸಭೆಯೊಂದನ್ನು ಆಯೋಜಿಸಿತ್ತು. ರಾಜ್ಯದೆಲ್ಲೆಡೆಯಿಂದ ಬರುವ 1 ಲಕ್ಷಕ್ಕೂ ಹೆಚ್ಚಿನ ಜನವಿದರಲ್ಲಿ ಭಾಗವಹಿಸುತ್ತಾರೆ ಎಂದು ಪ್ರಚಾರವನ್ನೂ ಅದು ನೀಡಿತ್ತು. ಅದರೆ ಆ ಸಂಖ್ಯೆ ಇಳಿಯುತ್ತಾ ಇಳಿಯುತ್ತಾ ಕೊನೆಗೆ 5 ಸಾವಿರಕ್ಕೆ ಬಂದು ಮುಟ್ಟಿತು.
ಆದರೆ ನಾವು ಹಮ್ಮಿಕೊಂಡಿದ್ದು ಪಕ್ಷದ ಪದಾಧಿಕಾರಿಗಳ ಸಭೆ. ಕೇವಲ 1 ಸಾವಿರ ಪದಾಧಿಕಾರಿಗಳು ಬರಬಹುದು ಎಂಬುದು ನಮ್ಮ ಅಂದಾಜಾಗಿತ್ತು. ಈಗಾಗಲೇ ಇಲ್ಲಿ ಸೇರಿರುವ ಪದಾಧಿಕಾರಿಗಳ ಸಂಖ್ಯೆ 5 ಸಾವಿರ ದಾಟಿದೆ. ಪರವೂರುಗಳಿಂದ ಬರುವವರು ಇನ್ನೂ ಇದ್ದಾರೆ. ರಾಜ್ಯದಲ್ಲಿ ಅದ್ಬುತ ನೆಲೆಗಟ್ಟನ್ನು ಹೊಂದಿರುವ ಪಕ್ಷ ಅಂತ ಏನಾದರೂ ಇದ್ದರೆ ಅದು ಜೆಡಿಎಸ್ ಮಾತ್ರ ಎಂಬುದು ಇದರಿಂದಲೇ ತಿಳಿದುಬರುತ್ತದೆ ಎಂದು ದತ್ತಾ ಸಮರ್ಥಿಸಿಕೊಂಡರು.
ಅಪಘಾತ, ಆಕಸ್ಮಿಕ, ನೋವು-ನಲಿವು, ಸಂಭ್ರಮ-ಸಡಗರ ಹೀಗೆ ರಾಜ್ಯದಲ್ಲಿ ಏನೇ ಘಟನೆಗಳು ಘಟಿಸಲಿ ಜನ ಮೊರೆ ಹೋಗುವುದು ದೇವೇಗೌಡರನ್ನೇ. ಈ ದೃಷ್ಟಿಯಿಂದ ಅವರು ಪ್ರಶ್ನಾತೀತ ನಾಯಕ ಎಂದು ಹೇಳಿದ ದತ್ತಾ, ವಿಧಾನಸಭೆ ವಿಸರ್ಜನೆ ಆಗಲಿ ಅಂತ ಕಾಯ್ತಾ ಇದ್ವಿ. ಈಗ ಆಗಿದೆ. ಇನ್ನು ಪಕ್ಷ ಸಂಘಟನೆಗೆ ಮುಂದಾಗಬೇಕಿದೆ. ಅದಕ್ಕೆ ಈ ಸಮಾವೇಶ ಮುನ್ನುಡಿ ಬರೆಯಲಿದೆ ಎಂದು ನುಡಿದರು.
ಸಿದ್ರಾಮಯ್ಯ, ತಿಪ್ಪಣ್ಣ, ಎಂ.ಪಿ.ಪ್ರಕಾಶ್ ಇವರೆಲ್ಲ ಈ ಹಿಂದೆ ರಾಜ್ಯ ಜೆಡಿಎಸ್ ಅಧ್ಯಕ್ಷರಾಗಿದ್ದವರು. ಆದರೆ ಎಲ್ಲ ಸಂದರ್ಭಗಳಲ್ಲೂ ಕಾರ್ಯಕಾರಿಣಿ ಸಭೆ ನಡೆಸುವಲ್ಲಿ ದೇವೇಗೌಡರು ಮಾತ್ರ ಶ್ರಮ ವಹಿಸುತ್ತಿದ್ದರೇ ಹೊರತು ಈ ಮಹಾನುಭಾವರಲ್ಲ. ಪಕ್ಷದ ಕಚೇರಿಗೆ ಬರುವ ಪರಿಪಾಠವನ್ನೇ ಅವರು ಇಟ್ಟುಕೊಂಡಿರಲಿಲ್ಲ. ಎಷ್ಟು ಜನ ಸದಸ್ಯರ ನೋಂದಣಿಯಾಗಿದೆ ಎಂಬುದನ್ನು ಪರೀಶೀಲಿಸುವ ಗೋಜಿಗೂ ಅವರು ಹೋಗುತ್ತಿರಲಿಲ್ಲ. ಸಭೆಯಲ್ಲಿ ಬಂದು ಪುಂಖಾನುಪುಂಖವಾಗಿ ಆ ಅಧ್ಯಕ್ಷರುಗಳು ಭಾಷಣ ಬಿಗಿಯುತ್ತಿದ್ದರು ಎಂದು ಹೇಳುವ ಮೂಲಕ ಈ ಸಭೆಯ ಪ್ರೇರಕ ಶಕ್ತಿ ದೇವೇಗೌಡ ಎಂಬ ಅಂಶವನ್ನು ದತ್ತ ಬಿಂಬಿಸಿದರು.
ಇದು ಶಾಂತಿಕಾಲದ ಅಥವಾ ಆರ್ಥಿಕ ಚಿಂತನೆಗಳನ್ನು ನಡೆಸುವ ಸಭೆಯಲ್ಲ; ಬದಲಿಗೆ ಯುದ್ಧಕಾಲದ ಸಭೆ. ಚುನಾವಣೆಯ ರಂಗತಾಲೀಮಿಗೆ ಇದು ಪ್ರೇರಕ ಎಂದು ಹೇಳುವ ಮೂಲಕ ದತ್ತ ಪದಾಧಿಕಾರಿಗಳನ್ನು ಪ್ರೇರೇಪಿಸಿದರು.
ಸಭೆ ಪ್ರಾರಂಭವಾದಾಗ ಕುಮಾರಸ್ವಾಮಿ ಇನ್ನೂ ಬಂದಿರಲಿಲ್ಲ. ಪಕ್ಷದ ಪ್ರಮುಖ ಅಕರ್ಷಣೆಯಾದ ಕುಮಾರಣ್ಣ ಇನ್ನೂ ಯಾಕ ಬರಲಿಲ್ಲಾ ಅಂತ ಎಲ್ಲರೂ ಎದಿರು ನೋಡುತ್ತಿದ್ದಿರಿ ಎಂದು ಗೊತ್ತು; ಸದ್ಯದಲ್ಲಿಯೇ ಬರಲಿದ್ದಾರೆ ಎಂದು ದತ್ತಾ ಹೇಳಿದಾಗ ಹೊರಹೊಮ್ಮಿದ ಪದಾಧಿಕಾರಿಗಳ ಉತ್ಸಾಹದ ಉದ್ಗಾರಗಳು ಸ್ವಲ್ಪ ಸಮಯದ ನಂತರ ಕುಮರಸ್ವಾಮಿ ಸಭೆಗೆ ಆಗಮಿಸಿದಾಗ ಮತ್ತೆ ಧ್ವನಿಸಿತು.
ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ, ಇಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಅಂತ ಕೆಲವರು ಹೇಳಿಕೊಂಡು ತಿರುಗುತ್ತಿದ್ದಾರೆ. ಅದರೆ ನಮ್ಮ ಪಕ್ಷದಲ್ಲಿ ವಾಸ್ತವವಾಗಿ ಅಗತ್ಯಕ್ಕಿಂತ ಹೆಚ್ಚಿನದೇ ಮಟ್ಟದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಕಾಂಗ್ರೆಸ್‌ನಲ್ಲಿರುವಂತೆ ಸೋನಿಯಾ-ರಾಹುಲ್ ಗಾಂಧಿಯ ಮರ್ಜಿಗೆ ಕಾಯುವ ಅಗತ್ಯ ಇಲ್ಲಿಲ್ಲ. ಬಿಜೆಪಿಯಂತೆ ನಮ್ಮದು ಫ್ಯಾಸಿಸ್ಟ್ ಪಕ್ಷವೂ ಅಲ್ಲ ಎಂದು ದತ್ತ ಆ ಪಕ್ಷಗಳನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ಈ ಕಾರ್ಯಕಾರಿಣಿ ಸಭೆ ಸಂಜೆಯವರೆಗೆ ನಡೆಯಲಿದ್ದು ವರಿಷ್ಠ ದೇವೇಗೌಡ ಹಾಗೂ ಕುಮಾರಸ್ವಾಮಿ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.
|