ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರೂ ಸೇರಿದಂತೆ ಮುಖಂಡರು ಕೈಗೊಂಡ ನಿರ್ಣಯಗಳನ್ನು ಪ್ರಶ್ನಿಸಲಾರದೇ ನೋವು ಅನುಭವಿಸಿದ್ದ ಸಮಾನ ಮನಸ್ಕರು ಎಂದು ಕರೆದುಕೊಳ್ಳುವ ಬಂಡಾಯವೆದ್ದ ಜೆಡಿಎಸ್ ಮಾಜಿ ಶಾಸಕರು ಗುರುವಾರ ಬೆಂಗಳೂರು ಅರಮನೆಯ ಆವರಣದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಮುಂದಿನ ಎಂಟು ದಿನಗಳಲ್ಲಿ ಎಂ.ಪಿ.ಪ್ರಕಾಶ್ ನೇತೃತ್ವದಲ್ಲಿ ಸಮಾನ ಮನಸ್ಕರ ಸಭೆ ಮತ್ತೆ ಸೇರಲಿದೆ. ಗುರುವಾರ ನಡೆದ ಕಾರ್ಯಕಾರಿಣಿ ಸಭೆ ಕೇವಲ ಬಹಿರಂಗ ಸಭೆಯಾಗಿದ್ದರಿಂದ ಅದರಲ್ಲಿ ನಾವು ಭಾಗವಹಿಸಿಲ್ಲ ಎಂದು ಬಂಡಾಯಬಣದ ನಾಯಕ ಎಂ.ಪಿ.ಪ್ರಕಾಶ್ ಹೇಳಿದ್ದಾರೆ.
ಈ ನಡುವೆ ಪ್ರಕಾಶ್ ಅವರನ್ನು ಅದೇ ಪಕ್ಷದ ಸುರೇಂದ್ರಮೋಹನ್ ಬಣದ ಪ್ರಮುಖ ಎಂ.ಪಿ.ವೀರೇಂದ್ರಕುಮಾರ್ ಅವರು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಜೆಡಿಎಸ್ ನಲ್ಲಿ ಆ ಬಣ, ಈ ಬಣ ಎಂಬುದಿಲ್ಲ. ಸುರೇಂದ್ರಮೋಹನ್ ನೇತೃತ್ವದ ಜೆಡಿಎಸ್ ನಿಜವಾದ ಜಾತ್ಯತೀತ ಜನತಾದಳ, ಈ ಪಕ್ಷ ದೇವೇಗೌಡರದ್ದಲ್ಲ ಎಂದು ನುಡಿದಿದ್ದಾರೆ.
ಜೆಡಿಎಸ್ ಬೆಳೆಯಲು ಪ್ರಕಾಶ್ ಅವರು ಕಾರಣಕರ್ತರು. ಆದ್ದರಿಂದ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಮ್ಮ ಸಹಮತ ಇದೆ ಎಂದು ತಿಳಿಸಿದ್ದಾರೆ.
|