ಉಡುಪಿ: ವಿವಾದಕ್ಕೆ ಕಾರಣವಾಗಿರುವ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಪರ್ಯಾಯಕ್ಕೆ ಸಂಬಂಧಿಸಿದಂತೆ ಶ್ರೀಕೃಷ್ಣದೇವಾಲಯದಲ್ಲಿ ನಡೆದ ಸಂಧಾನ ಸಭೆ ಒಮ್ಮತದ ತೀರ್ಮಾನಕ್ಕೆ ಬರುವಲ್ಲಿ ವಿಫಲವಾಗಿದೆ.
ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರು ಪರ್ಯಾಯೋತ್ಸವ ನಡೆಸಬಹುದು. ಆದರೆ ಶ್ರೀಕೃಷ್ಣನ ಪೂಜೆ ನಡೆಸಬಾರದು ಎಂಬ ಪೇಜಾವರ ಶ್ರೀಗಳ ನೇತೃತ್ವದ ಉಳಿದ ಮೂರು ಮಠಾಧೀಶರ ನಿಲುವನ್ನು ಪುತ್ತಿಗೆ ಶ್ರೀಗಳು ಮನ್ನಿಸಲಿಲ್ಲ. ಅವರು ಸಭೆಯಿಂದ ಅರ್ಧದಲ್ಲೇ ಹೊರನಡೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಪ್ರಸ್ತುತ ಪರ್ಯಾಯ ಪೀಠದಲ್ಲಿರುವ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥರು, ಪಲಿಮಾರು ಶ್ರೀವಿದ್ಯಾಧೀಶತೀರ್ಥರು, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥರು ಮಾತ್ರ ಸಂಧಾನ ಸಭೆಯಲ್ಲಿ ಭಾಗವಹಿಸಿದ್ದರು. ಪುತ್ತಿಗೆ ಶ್ರೀಗಳ ಬೆಂಬಲಕ್ಕೆ ನಿಂತ ಶಿರೂರು ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿ ಸಭೆ ಬಹಿಷ್ಕರಿಸಿದರು. ತಾವು ತಮ್ಮ ಪರ್ಯಾಯಕ್ಕೆ ಸಂಪೂರ್ಣ ಸಿದ್ಧತೆ ನಡೆಸಿದ್ದು, ತಮ್ಮನ್ನು ಈ ಕೊನೆಯ ಕ್ಷಣದಲ್ಲಿ ಇಂಥ ಸಂಕಷ್ಟದಲ್ಲಿ ದೂಡುತ್ತಾರೆ ಹಾಗೂ ಮಾನಸಿಕ ಒತ್ತಡಕ್ಕೆ ಸಿಲುಕಿಸುತ್ತಾರೆ ಎಂದು ತಾವು ಭಾವಿಸಿರಲಿಲ್ಲ ಎಂದು ಪುತ್ತಿಗೆ ಶ್ರೀಗಳು ತಿಳಿಸಿದ್ದಾರೆ.
ಪುತ್ತಿಗೆ ಶ್ರೀಗಳು ಉಳಿದ ಮಠಾಧೀಶರ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ಕೊಡುವಂತೆ ಕೇಳಿದ್ದು, ಅದನ್ನು ಸದ್ಯದಲ್ಲೇ ಸಲ್ಲಿಸಲಾಗುವುದು ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
|