ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಂಚುಗಳ ಬಗ್ಗೆ ಪುಸ್ತಕ ಬರೆಯುವೆ: ದೇವೇಗೌಡ
ಈ ದೇವೇಗೌಡನ ಕೆಚ್ಚನ್ನು ನಿನ್ನ ಜೀವನದಲ್ಲೂ ಅಳವಡಿಸಿಕೋ ಕುಮಾರಾ... ನಿನ್ನನ್ನು ಯಾರೂ ಅಲ್ಲಾಡಿಸಲು ಸಾಧ್ಯವಾಗೋದಿಲ್ಲ.

ಇವು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜೆಡಿಎಸ್ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ದೇವೇಗೌಡರು ಉದುರಿಸಿದ ಆಣಿಮುತ್ತುಗಳು. ಒಂದು ರೀತಿಯಲ್ಲಿ ಅದು ಇತರ ರಾಜಕೀಯ ಪಕ್ಷಗಳಿಗೆ ನೀಡಿದ ಸೂಕ್ಷ್ಮ ಎಚ್ಚರಿಕೆಯೂ ಆಗಿತ್ತು ಎಂಬುದು ಮತ್ತೊಂದು ವಿಶೇಷ.

ವಿಚಿತ್ರ ತಿರುವುಗಳನ್ನು ತೆಗೆದುಕೊಳ್ಳುತ್ತಿರುವ ರಾಜ್ಯದ ಪ್ರಸಕ್ತ ರಾಜಕೀಯದಲ್ಲಿ ಗೌಡರ ಈ ಮಾತುಗಳು ಅವರ ಪಕ್ಷದ ಕಾರ್ಯಕರ್ತರಿಗೆ ಸಂಬಂಧಿಸಿ ಸಾಂದರ್ಭಿಕವಾಗಿಯೇ ಇತ್ತು. ಏಕೆಂದರೆ ಸದ್ಯದಲ್ಲಿಯೇ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಪಕ್ಷವನ್ನು ಮತ್ತಷ್ಟು ಬಲವಾಗಿ ಸಂಘಟಿಸುವ ಅವಶ್ಯಕತೆ ಹಾಗೂ ಅನಿವಾರ್ಯತೆ ಜೆಡಿಎಸ್‌ಗೆ ಒದಗಿಬಂದಿದೆ.

ಪಕ್ಷದ ಹಲವು ನಾಯಕರು ಭಾಷಣ ಮಾಡಿದ ನಂತರ ಮಾತಿಗೆ ನಿಂತ ದೇವೇಗೌಡ ತಾವು ಯಾರಿಗೂ, ಯಾವ ಪಕ್ಷಕ್ಕೂ ಅನ್ಯಾಯ ಮಾಡಿಲ್ಲ ಎಂದು ಹೇಳುವಾಗ ತಮ್ಮ ಮೇಲಾಗಿರುವ ಆಪಾದನೆಗಳಿಗೆ ತಮ್ಮದೇ ಆದ ವಿಶಿಷ್ಟ, ವ್ಯಂಗ್ಯಭರಿತ ಶೈಲಿಯಲ್ಲಿ ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡಿದರು.

ಈ ದೇವೇಗೌಡ ಸ್ವಂತಕ್ಕಾಗಿ ಎಂದೂ ಹೋರಾಟ ನಡೆಸಿಲ್ಲ. ಬಿಜೆಪಿಯವರ ಜತೆ ಸೇರಿ ಕುಮಾರಸ್ವಾಮಿ ಸರ್ಕಾರ ರಚಿಸುವಾಗಲೂ ನನಗೆ ತೀವ್ರ ನೋವಾಗಿತ್ತು. ಆಸ್ಪತ್ರೆಗೂ ದಾಖಲಾಗಿದ್ದೆ. ಆದರೆ ಪ್ರತಿ ಬಾರಿ ಜನತಾದಳ ಹೋಳಾದಾಗಲೂ ಅದಕ್ಕೆ ದೇವೇಗೌಡರೇ ಕಾರಣ ಎಂದು ಆಪಾದಿಸಲಾಗುತ್ತಿದೆ.

ಮೊದಲು ನನ್ನನ್ನು ಬ್ರಾಹ್ಮಣ ವಿರೋಧಿ ಎಂದು ಹೇಳಿದರು. ಈಗ ಲಿಂಗಾಯಿತ ವಿರೋಧಿ ಎನ್ನುತ್ತಿದ್ದಾರೆ. 20 ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿ ಅನುಭವಿಸಿದ ನೋವನ್ನು ಮತ್ತೆ ಅನುಭವಿಸದಂತಾಗಲಿ ಎಂಬ ಕಾರಣಕ್ಕೆ ಒಪ್ಪಂದ ಸೂತ್ರಗಳನ್ನು ಮುಂದೊಡ್ಡಿದೆನೇ ವಿನಃ ಛಾಪಾ ಕಾಗದ ತರಲಿಲ್ಲ. ಈ ದೇಶವನ್ನು ಆಳಿದ ನನಗೆ ಅಷ್ಟೂ ವಿವೇಚನೆಯಿಲ್ಲವೇ?. ನಾನಂತೂ ಇನ್ನು ಸುಮ್ಮನೇ ಕೂರುವುದಿಲ್ಲ. ನನ್ನ ವಿರುದ್ಧ ನಡೆದ ರಾಜಕೀಯ ಸಂಚುಗಳ ಕುರಿತು ಪುಸ್ತಕ ಬರೆಯುವೆ, ದೇವೇಗೌಡ ಏನೆಂದು ಸಾಬೀತು ಪಡಿಸುವೆ ಎಂದು ಗುಡುಗಿದರು ಗೌಡರು.

ದೇವೇಗೌಡರ ಭಾಷಣದ ಮಧ್ಯೆ ಆಗಾಗ ಕಾಂಗ್ರೆಸ್ ಸರ್ಕಾರಗಳ ಕುರಿತಾದ ಟೀಕಾ ಪ್ರಹಾರ, ಎಸ್.ಎಂ.ಕೃಷ್ಣರ ಕುರಿತಾದ ವ್ಯಂಗ್ಯಭರಿತ ಮಾತುಗಳು ಇಣುಕುಹಾಕುತ್ತಿದ್ದುದು ವಿಶೇಷವಾಗಿತ್ತು, ಅದು ನೀರೀಕ್ಷಿತವೂ ಆಗಿತ್ತು.

ಒಟ್ಟಿನಲ್ಲಿ ಪಕ್ಷದ ಪದಾಧಿಕಾರಿಗಳನ್ನು ಮುಂದೆ ಬರಲಿರುವ ಚುನಾವಣೆಗಳಿಗೆ ಸಜ್ಜುಗೊಳಿಸಲು ದೇವೇಗೌಡರು ಆಯ್ದುಕೊಂಡಿದ್ದು ತಮ್ಮ ಎಂದಿನ ವಿಶಿಷ್ಟ ಶೈಲಿಯನ್ನು.
ಮತ್ತಷ್ಟು
ಮೀಸಲಾತಿ: ಜನಪ್ರತಿನಿಧಿಗಳ ಪರದಾಟ
ಪರ್ಯಾಯ ವಿವಾದ: ಸಂಧಾನ ವಿಫಲ
ಜೆಡಿಎಸ್ ಕಾರ್ಯಕಾರಿಣಿ ಸಭೆಯಲ್ಲಿ ಗೈರುಹಾಜರಾದ ಭಿನ್ನಮತೀಯರು
ಅಂತೂ ಇಂತೂ ವಿಧಾನಸಭೆ ವಿಸರ್ಜನೆ
ವಿಧಾನಸಭೆ ಸ್ಪೀಕರ್ ಹುದ್ದೆ ಅಬಾಧಿತ
ಜೆಡಿಎಸ್ ಕಾರ್ಯಕಾರಿಣಿಯಲ್ಲಿ ದತ್ತ ಸಂಭ್ರಮ