ಯಾವ ಕಾರಣಕ್ಕೂ ಪಕ್ಷ ಒಡೆಯುವುದಿಲ್ಲ, ಬೇರೆ ಪಕ್ಷ ಕಟ್ಟುವುದಿಲ್ಲ ಎಂಬರ್ಥದ ಮಾತುಗಳನ್ನಾಡುತ್ತಿದ್ದ ಜೆಡಿಎಸ್ ನಾಯಕ ಎಂ.ಪಿ.ಪ್ರಕಾಶ್ ತಮ್ಮ ರಾಗ ಬದಲಿಸಿದ್ದು ಈಗ ಪಕ್ಷ ತೊರೆಯುವ ಮಾತುಗಳನ್ನಾಡಿದ್ದಾರೆ.
ಪಕ್ಷದಲ್ಲಿ ಅಪಸ್ವರ ಎತ್ತಿರುವ ನಾಯಕರು ಒಂದೇ ದಿನದಲ್ಲಿ ನಿರ್ಧಾರ ಕೈಗೊಳ್ಳಿ, ಎಂಟು ದಿನ ಏಕೆ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿನ್ನೆ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಹಿನ್ನೆಲೆಯಲ್ಲಿ ಪ್ರಕಾಶ್ ಈ ನಿರ್ಧಾರ ಕೈಗೊಂಡಿದ್ದಾರೆಂಬುದು ರಾಜಕೀಯ ಪಂಡಿತರ ಅಭಿಮತ.
ಈ ಕುರಿತು ಕಾರ್ಯಕರ್ತರ ಜತೆಗೆ ಸಮಾಲೋಚಿಸಬೇಕಿರುವುದರಿಂದ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಕಷ್ಟು ಸಮಯ ಬೇಕು. ಕುಮಾರಸ್ವಾಮಿ ಹೇಳಿದ ಮಾತ್ರಕ್ಕೆ ಅವಸರಕ್ಕೆ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಇದುವರೆಗೂ ಜೆಡಿಎಸ್ ನಾಯಕರು ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದರು. ಆದರೆ ಇಷ್ಟಾದ ಮೇಲೂ ನಿನ್ನೆಯ ಸಭೆಯಲ್ಲಿ ಅವರ ನಡವಳಿಕೆಗಳಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ದಳದಲ್ಲಿರುವುದು ಸೂಕ್ತವಲ್ಲ ಎಂದು ನಿರ್ಧರಿಸಿರುವೆ ಎಂದು ಪ್ರಕಾಶ್ ತಿಳಿಸಿದ್ದಾರೆ.
ಜೆಡಿಎಸ್ ಮನೆಯಿಂದ ಪ್ರಕಾಶ್ ಹೊರಬೀಳುವುದೇನೋ ಖಚಿತವಾಗಿದೆ. ಆದರೆ ಅವರ ಮುಂದಿನ ಮನೆ ಯಾವುದು ಎಂಬುದೇ ಈಗ ಕುತೂಹಲಕರ ಪ್ರಶ್ನೆ. ಅವರ ಹಳೆಯ ಸಹವರ್ತಿ ಸಿದ್ರಾಮಯ್ಯನವರು ಕಾಂಗ್ರೆಸ್ ಸೇರಿದ್ದು ಅಲ್ಲಿಯೂ ಅವರಿಗೆ ಹೇಳಿಕೊಳ್ಳುವಂಥ ಸ್ಥಾನವಿನ್ನೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕಾಶ್ ಸಾಕಷ್ಟು ಯೋಚಿಸಿಯೇ ಅಡಿಯಿಟ್ಟು ತಮ್ಮ ರಾಜಕೀಯ ಜೀವನದ ಮತ್ತೊಂದು ಇನ್ನಿಂಗ್ಸ್ ಪ್ರಾರಂಭಿಸಬೇಕಿದೆ ಎಂಬುದು ವಿವೇಚನಾಶೀಲರ ಮಾತು.
|