ಬಹು ಆಕರ್ಷಕ ಬೆಂಗಳೂರು ಹಬ್ಬಕ್ಕೆ ಇಂದು ವಿದ್ಯುಕ್ತವಾದ ಚಾಲನೆ ಸಿಗಲಿದೆ. ಬಾರ್ ಬೆಂಗಳೂರಿಗರ ಬೋರ್ ತಣಿಸಲು ಮತ್ತೊಂದು ಭರಾ ಭರ್ ಬೆಂಗಳೂರು ಹಬ್ಬಕ್ಕೆ ಇಂದು ಚಾಲನೆ ದೊರಕಲಿದೆ.
ಸುಮಾರು 3,000ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳ ಕಲೋಪಾಸಕರು ಬೆಂಗಳೂರಿಗರನ್ನು ಕೆಲವೇ ಕ್ಷಣಗಳಲ್ಲಿ ಅಂದರೆ ಇಂದು ಬೆಳಿಗ್ಗೆ 11 ಘಂಟೆಗೆ ದಂಗ್ ಮಾಡಲು ಸಜ್ಜಾಗಿದ್ದಾರೆ.
ಐಟಿ ವೇವ್ ಹೊರತಾದ ಸಾಂಸ್ಕ್ಕತಿಕ ಉತ್ಸವವೆಂದೇ ಹೆಸರಾದ ಬೆಂಗಳೂರ ಹಬ್ಬ ಈ ಬಾರಿ ಹಿಂದೆಂದಿಗಿಂತಲೂ ವಿಭಿನ್ನವಾಗಿದ್ದು ಎಲ್ಲ ವರ್ಷಗಳಿಗಿಂತ ಹೆಚ್ಚು ಜನರನ್ನು ತನ್ನೆಡೆಗೆ ಸೆಳೆಯುವ ನೀರೀಕ್ಷೆಯಿದೆ. ಬೆಂಗಳೂರ ಹಬ್ಬದಲ್ಲಿ ಏನೆಲ್ಲಾ ಇದೆ ಎಂದು ಕೇಳುವುದಕ್ಕಿಂತ ಏನಿಲ್ಲ ಎಂದು ಹುಡುಕುವುದೇ ಸೂಕ್ತ.
ಹೆಚ್.ಎ.ಎಲ್. ಕಾರ್ಪೋರೇಟ್ ಆಫೀಸ್ ಬಳಿಯ ಮಿನಿ ವೃತ್ತದ ಬಳಿ ಚಕಾಚಕ್ ಮಿಣುಕು ಬೆಳಕುಗಳ ಮಿಂಚಾಟಗಳಲ್ಲಿ ಶ್ರೇಷ್ಟ ಕಲಾವಿದರ ತಂಡದ ಪ್ರವೇಶದೊಂದಿಗೆ ಇಂದು ಬೆಳಿಗ್ಗೆ ಕರಕುಶಲ ಮತ್ತು ನೃತ್ಯ ಪ್ರದರ್ಶನದೊಂದಿಗೆ ಶುರುವಾಗಲಿದ್ದು ಇದರಲ್ಲಿ ಸುಮಾರು 200 ಕಲಾವಿದರು ಭಾಗವಹಿಸಲಿದ್ದಾರೆ ಎಂದು ಹಬ್ಬದ ಆಯೋಜಕ ಎಂಎಫ್ಎಫ್ಎ ನ ನಂದಿನಿ ಹೇಳುತ್ತಾರೆ.
ಬೆಂಗಳೂರು ಹಬ್ಬವನ್ನು ನಗರದ ಪ್ರಸಿದ್ಧ ಪ್ರದೇಶಗಳಾದ ಚಿತ್ರಕಲಾ ಪರಿಷತ್, ಅಂಬೇಡ್ಕರ್ ಭವನ, ಕಬ್ಬನ್ ಪಾರ್ಕ್ ಹಾಗೂ ಅರಮನೆ ಮೈದಾನ ಮುಂತಾದ ಬೇರೆ ಬೇರೆ ಕಡೆಗಳಲ್ಲಿ ಇಂದಿನಿಂದ ಡಿಸೆಂಬರ್ 9 ರವರೆಗೆ ನಡೆಸಲು ಏರ್ಪಾಡಾಗಿದೆ. ಹಬ್ಬದ ಸವಿಯೂಟ ಬಯಸುವವರಿಗಾಗಿ ವಿಶೇಷ ಪಾಸ್‌ಗಳ ವಿತರಣಾ ವ್ಯವಸ್ಥೆಯನ್ನು ನಗರದ ಎಲ್ಲ ಕೆಫೆ, ಕಾಫಿ ಡೇ ಹಾಗೂ ಏರ್‌ಟೆಲ್ ಕೇಂದ್ರಗಳಲ್ಲಿ ಮಾಡಲಾಗಿದೆ.
ಕಳೆದ ಬಾರಿಯ ಬೆಂಗಳೂರ ಹಬ್ಬ ಕೇವಲ ಸಾಂಸ್ಕ್ಕತಿಕ ಚಟುವಟಿಕೆಗಷ್ಟೇ ಮೀಸಲಾಗಿತ್ತು. ಈ ಬಾರಿ ವಿಶೇಷವಾಗಿ ಕ್ರೀಡೆಯ ಸೊಗಡಿನ ಸಿರಿಯೂ ಹಬ್ಬಕ್ಕೆ ಸೇರ್ಪಡೆಯಾಗಿದೆ. ಕ್ರೀಡೆಯನ್ನು ಮತ್ತೂ ರಂಜನೀಯವಾಗಿರುವಂತೆ ಮಾಡಲು ಈಜುಡುಗೆ ಸ್ಪರ್ಧೆ ಹಾಗೂ ಗಾಲ್ಫ್ ಪ್ರಿಯರಿಗಾಗಿ ಗಾಲ್ಫ್ ಸ್ಪರ್ದೆ ಸಹ ಹಬ್ಬದ ವಾತಾವರಣಕ್ಕೆ ಮತ್ತಷ್ಟು ಮೆರಗು ತಂದು ಕೊಡಲಿದೆ.
ಸಾಂಸ್ಕ್ಕತಿಕ ಸಂಭ್ರಮದ ಗಾನಸುಧೆಯಲ್ಲಿ ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತ ದಿಗ್ಗಜರಾದ ಗಣಪತಿ ಭಟ್, ಅಶ್ವಿನಿ ಭಿಡೆ ದೇಶಪಾಂಡೆ, ಶಾಹಿದ್ ಪರ್ವೇಜ್ ಖಾನ್, ಪಂಡಿತ್ ವಿಶ್ವ ಮೋಹನ್ ಭಟ್, ಕಾಸರವಳ್ಳಿ ಸಹೋದರರು, ಟಿ.ಎಸ್. ಮಣಿ, ಎಂ.ಎಸ್. ಶೀಲ, ತಿರುಚೂರ್ ವಿ. ರಾಮಚಂದ್ರನ್ ಮುಂತಾದವರು ಬೆಂಗಳೂರಿಗನ್ನು ಮೀಯಿಸಲಿದ್ದಾರೆ.
ಕಳೆದ ವರ್ಷದ ಮೊದಲೈದು ದಿನಗಳಲ್ಲಿ ಸುಮಾರು 3.5 ಲಕ್ಷ ಜನರನ್ನು ತನ್ನೆಡೆಗೆ ಸೆಳೆದಿದ್ದ ಬೆಂಗಳೂರ ಹಬ್ಬ ಈ ಬಾರಿ ಮತ್ತೂ ಆಕರ್ಷಕವಾಗಲಿದೆ ಎಂಬ ನೀರೀಕ್ಷೆಯಿದೆ. ಈಗಾಗಲೇ ನೂರಾರು ಕಲಾರಸಿಕರು ಕಾತುರದಿಂದ ಬೆಂಗಳೂರ ಹಬ್ಬದ ಚಾಲನೆಗೆ ತುದಿಗಾಲಲ್ಲಿ ನಿಂತಿರುವುದು ಇದಕ್ಕೆ ಸಾಕ್ಷಿಯಾಗಿದೆ.
|