ಸಾಗರೋಲ್ಲಂಘನ ಮಾಡಿ ಬಂದಿರುವ ಪುತ್ತಿಗೆ ಮಠದ ಶ್ರೀಗಳಾದ ಶ್ರೀ ಸುಗುಣೇಂದ್ರ ತೀರ್ಥರು ಪರ್ಯಾಯದ ವೇಳೆಯಲ್ಲಿ ಕೃಷ್ಣ ಪೂಜೆಯ ತಮ್ಮ ಹಕ್ಕನ್ನು ಸಮರ್ಥಿಸಿಕೊಂಡಿರುವುದನ್ನು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ, ಹಿರಿಯ ಸಂಸ್ಕ್ಕತ ವಿದ್ವಾಂಸ ಎ.ಹರಿದಾಸ ಭಟ್ಟ ಕಟುವಾಗಿ ಟೀಕಿಸಿದ್ದಾರೆ.
ತಮ್ಮ ಟೀಕೆಗಳಿಗೆ ಶಾಸ್ತ್ತ್ರಗಳಲ್ಲಿ ನೀಡಲಾಗಿರುವ ಆಧಾರಗಳನ್ನು ಉಲ್ಲೇಖಿಸಿ ಅವರು ತಮ್ಮ ವಾದಕ್ಕೆ ಸಮರ್ಥನೆಯನ್ನು ನೀಡಿದ್ದಾರೆ.
ಸನ್ಯಾಸತ್ವ ಸ್ವೀಕರಿಸಿದವರು ಸಾಗರೋಲ್ಲಂಘನ ಮಾಡಿದಾಗ ಆಶ್ರಮಭ್ರಷ್ಠರಾಗುತ್ತಾರೆ. ಮೇಲಾಗಿ ಧರ್ಮಾಚರಣೆಗೆ ಭಾರತ ಬಿಟ್ಟು ಬೇರಾವ ದೇಶವೂ ಯೋಗ್ಯವಲ್ಲವೆಂದು ಶಾಸ್ತ್ತ್ರಗಳಲ್ಲಿ ನಿರ್ಣಯಿಸಲಾಗಿದೆ. ಒಂದು ವೇಳೆ ವಿದೇಶಯಾತ್ರೆ ಮಾಡಿ ಕಠಿಣ ಪ್ರಾಯಶ್ಚಿತ್ತಗಳನ್ನು ಮಾಡಿಕೊಂಡರೂ ಅವರು ಪೂಜೆಗೆ ಅರ್ಹರಾಗುವುದಿಲ್ಲ. ಶಾಸ್ತ್ತ್ರಗಳು ಆಧ್ಯಾತ್ಮ ಸಾಧಕನಿಗೆ ಶಾಸನವಿದ್ದಂತೆ. ಅದನ್ನು ಮೀರುವಂತಿಲ್ಲ ಎಂದು ಪ್ರತಿಪಾದಿಸಿರುವ ಹರಿದಾಸ ಭಟ್ಟರು ಧಾರ್ಮಿಕ ಮೂಲತತ್ವಗಳಿಗೆ ವಿರೋಧಿಯಾದ ಪರಿವರ್ತನೆ ಸುಧಾರಣೆ ಅಲ್ಲ; ಉಲ್ಲಂಘನೆ ಎನಿಸಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ತ್ರಿಮತಸ್ಥ ಪೀಠಗಳಲ್ಲೂ ಇದುವರೆಗೂ ಯಾವುದೇ ಸನ್ಯಾಸಿಗಳೂ ವಿದೇಶ ಪ್ರಯಾಣ ಕೈಗೊಂಡಿಲ್ಲ. ವಿದೇಶವಾಸದಂತಹ ಹೊಸ ಕ್ರಾಂತಿಯ ಹೆಜ್ಜೆ ಧರ್ಮಪೀಠಗಳ ನೈತಿಕ ಮತ್ತು ಧಾರ್ಮಿಕ ಮೌಲ್ಯದ ಅಧಃಪತನಕ್ಕೆ ನಾಂದಿ ಹಾಡಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
|