ಕಾರ್ಯಕಾರಿಣಿ ಸಭೆ ಎಂದು ಪ್ರಚಾರ ಪಡೆದು ನಂತರ ಕ್ರಿಯಾಶೀಲರ ಸಭೆಯಾಗಿ ಮಾರ್ಪಟ್ಟ ಜೆಡಿಎಸ್ ಸಭೆಯಲ್ಲಿ ಬಂಡಾಯ ಬಣಕ್ಕೆ ನೇತೃತ್ವ ವಹಿಸಿರುವ ಎಂ.ಪಿ.ಪ್ರಕಾಶ್ ಅವರನ್ನು ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಿಯಾಳಿಸಿ ಮಾತನಾಡಿದನಂತರ ಎಂ.ಪಿ.ಪ್ರಕಾಶ್ ಅವರು ಸಂಯುಕ್ತ ಜನತಾದಳದತ್ತ ಹೆಜ್ಜೆ ಇಡುವ ಸಾಧ್ಯತೆ ಹೆಚ್ಚಾಗಿದೆ.
ತಮ್ಮ ಚಟುವಟಿಕೆಗಳನ್ನು ಜೆಡಿಎಸ್ ಪಕ್ಷವನ್ನು ಒಡೆಯುವ ತಂತ್ರಗಳಲ್ಲ ಎಂದು ಬಣ್ಣಸಿದ್ದ ಅವರು ಜನತಾ ಪರಿವಾರ ಈ ವರೆಗೆ 13 ಬಾರಿ ಒಡೆದ ಮನೆಯಾಗಿದೆ. ಈ ಬಾರಿ ತಮ್ಮ ನೇತೃತ್ವದಲ್ಲಿ ಜೆಡಿಎಸ್ ಹೊಸ ರೂಪಪಡೆಯಲಿದೆ ಎಂದು ಹೇಳಿಕೆಗಳು ನೀಡುತ್ತಿದ್ದ ಎಂ.ಪಿ.ಪ್ರಕಾಶ್ ಅವರನ್ನು ಸಂಯುಕ್ತ ಜನತಾದಳದತ್ತ ಸೆಳೆಯಲು ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರು ಪುತ್ರ ಬಸವರಾಜಬೊಮ್ಮಾಯಿ ಅವರು ಮತ್ತು ಬಿಹಾರ ಮುಖ್ಯಮಂತ್ರಿ ನೀತೀಶ್ ಕುಮಾರ್ ಅವರು ಯತ್ನಿಸುತ್ತಿದ್ದಾರೆ.
ಎಂಟು ದಿನಗಳ ನಂತರ ತಮ್ಮ ಬಣದ ನಿರ್ಧಾರ ಎಂದು ಸಮಾನ ಮನಸ್ಕರ ಸಭೆಯಲ್ಲಿ ಪ್ರಕಟಿಸಿದ್ದ ಪ್ರಕಾಶ್ ಅವರನ್ನು ಛೇಡಿಸುವ ನಿಟ್ಟಿನಲ್ಲಿ ಎಂಟು ದಿನ ಏಕೆ ? 24 ಗಂಟೆಯೊಳಗೆ ಪಕ್ಷವನ್ನು ತೊರೆಯಲಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರಕಾಶ್ ತಲೆಕೆಡಿಸಿಕೊಂಡಿಲ್ಲ.
ದೇವೇಗೌಡ ಮತ್ತು ಅವರ ಮಕ್ಕಳ ಜತೆ ಮುನಿಸಿಕೊಂಡಿರುವ ಕೆಲ ಜೆಡಿಎಸ್ ಮಾಜಿ ಶಾಸಕರು ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ.
ಅವರ ಮನವೊಲಿಸಿ ಜೆಡಿಯುನತ್ತ ಅವರನ್ನು ಸೆಳೆಯಲು ಪ್ರಕಾಶ್ ಅವರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗೆ ಛಿದ್ರವಾಗಿರುವ ಜನತಾ ಪರಿವಾರವನ್ನು ಒಂದುಗೂಡಿಸುವ ಕಾರ್ಯಕ್ಕೆ ಜೆಡಿಯು ವೇದಿಕೆ ಒದಗಿಸಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
|