ರಾಜ್ಯದಲ್ಲಿ ವಿಸರ್ಜನೆ ಯಾಗಿ ರಾಷ್ಟ್ತ್ರಪತಿ ಆಡಳಿತವಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಸರ್ಕಾರದ ಮುಖ್ಯಕಾರ್ಯದರ್ಶಿ ಮುಂದುವರೆಯುವ ಹಾಗಿಲ್ಲವಾ ? ಎಂಬ ಪ್ರಶ್ನೆ ಎದುರಾಗಿದೆ.
ಏಕೆಂದರೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ಬಿ.ಮಹಿಷಿ ಅವರನ್ನು ಬದಲಾಯಿಸುವ ಪ್ರಸ್ತಾವೆನೆಯ ಬಗ್ಗೆ ಕೇಂದ್ರ ಸರ್ಕಾರದ ಪ್ರಮುಖರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿಗೆ ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ರಾಜ್ಯಪಾಲರು ಕೇಂದ್ರ ಸಚಿವ ಸಂಪುಟದ ಕಾರ್ಯದರ್ಶಿ ಕೆ.ಎಂ. ಚಂದ್ರಶೇಖರ್ ಅವರೊಂದಿಗೆ ಈ ವಿಷಯ ಕುರಿತು ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ಕಾರಣವೇನು ಎಂಬುದು ಪ್ರಶ್ನಾರ್ಹವಾಗಿದ್ದರೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ವೇಳೆ ಪಿ.ಬಿ.ಮಹಿಷಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಬದಲಾಯಿಸುವ ಅಗತ್ಯವಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.
ಈಗಿನ ಆಡಳಿತದಲ್ಲಿ ದೇವೇಗೌಡರ ಸಲಹೆಯಂತೆ ನೇಮಕವಾದ ಸರ್ಕಾರದ ಮುಖ್ಯಕಾರ್ಯದರ್ಶಿ ಮುಂದುವರೆಯಬಾರದು ಎಂಬುದು ಯುಪಿಎ ನೇತೃತ್ವದ ಕೇಂದ್ರ ಸರ್ಕಾರದ ಅಭಿಪ್ರಾಯವಾಗಿದೆ.
ಎಚ್.ಡಿ.ರೇವಣ್ಣ ಅವರು ಸಚಿವರಾಗಿದ್ದ ಲೋಕೋಪಯೋಗಿ ಇಲಾಖೆಯ ಮುಖ್ಯಕಾರ್ಯದರ್ಶಿಯಾಗಿದ್ದ ಪಿ.ಬಿ.ಮಹಿಷಿ ಅವರನ್ನು ಇನ್ನು ಐದು ಮಂದಿ ಅಧಿಕಾರಿಗಳ ಜೇಷ್ಠತೆಯನ್ನು ಕಡೆಗಣಿಸಿ ಸರ್ಕಾರದ ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕಮಾಡಿದ್ದೇ ಇದಕ್ಕೆ ಕಾರಣ ಎಂಬುದು ಸರ್ಕಾರದ ಮೂಲಗಳ ಅಭಿಪ್ರಾಯ. ಈ ಹೊಸ ಬೆಳವಣಿಗೆ ಅಧಿಕಾರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
|