ಬೆಂಗಳೂರು ಅಂತಾರಾಷ್ಟ್ತ್ರೀಯ ವಿಮಾನನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು ಈ ವಿಮಾನನಿಲ್ದಾಣ 2008 ಮಾರ್ಚ್‌ನಿಂದ ಕಾರ್ಯಾರಂಭ ಮಾಡುವ ನೀರೀಕ್ಷೆ ಇದೆ. ಆದರೆ ವಿಮಾನನಿಲ್ದಾಣಕ್ಕೆ ಹೋಗುವ ರಸ್ತೆಗಳು ದುಸ್ಥಿತಿಯಲ್ಲಿವೆ.
ಹೀಗಾಗಿ ವಿಮಾನನಿಲ್ದಾಣದ ಕಾಮಗಾರಿ ಪೂರ್ಣಗೊಂಡಿದ್ದರೂ ರಸ್ತೆಗಳು ಸೂಕ್ತವಾಗಿಲ್ಲದಿದ್ದರೆ ಎದುರಾಗುವ ಸಮಸ್ಯೆಗಳನ್ನು ಗಮನಿಸಿ ರಸ್ತೆ ಅವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯಪಡೆ ಕಾರ್ಯಪ್ರವೃತ್ತವಾಗಿದೆ.
ವಿಮಾನನಿಲ್ದಾಣಕ್ಕೆ ಪ್ರತ್ಯೇಕ ರಸ್ತೆ ನಿರ್ಮಾಣ ಯೋಜನೆ ಈಗಾಗಲೇ ಅನುಷ್ಠಾನಗೊಳ್ಳುವ ಸಾಧ್ಯತೆ ಇಲ್ಲ. ಹಾಗಾಗಿ ರಾಷ್ಟ್ತ್ರೀಯ ಹೆದ್ದಾರಿ 7 ರ ದುರಸ್ತಿ ಮಾಡುವ ಕಡೆ ಕಾರ್ಯಪಡೆ ಹೆಚ್ಚು ಆಸಕ್ತಿ ವಹಿಸಿದೆ.
ಈ ಕಾರ್ಯಪಡೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳು, ಲೋಕೋಪಯೋಗಿ, ಮೂಲಸೌಲಭ್ಯ ಅಭಿವೃದ್ದಿ ಇಲಾಖೆ, ಬಿಡಿಎ, ಬಿಬಿಎಂಪಿ, ಬಿಎಂಆರ್‌ಡಿಎ, ಪೊಲೀಸ್, ಉದ್ಯಮಗಳ ಪ್ರತಿನಿಧಿಗಳ ಸದಸ್ಯರಿದ್ದಾರೆ.
ಬೆಂಗಳೂರು ಹೃದಯಭಾಗ ಹಾಗೂ ಹೆಚ್ಚು ಐಟಿ, ಬಿಟಿ ಕಂಪನಿಗಳು ಇರುವ ಕಡೆಯಿಂದ ವಿಮಾನನಿಲ್ದಾಣಕ್ಕೆ ಹೋಗುವ ರಸ್ತೆಗಳಲ್ಲಿರುವ ಅಡಚಣೆಗಳನ್ನು ನಿವಾರಿಸುವ ಸಲುವಾಗಿ ಕ್ಷಿಪ್ರವಾಗಿ ತೆಗೆದುಕೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಕಾರ್ಯಪಡೆ ಚರ್ಚೆ ನಡೆಸಿದೆ.
ವಿಧಾನಸೌಧದಿಂದ ಹೆಬ್ಬಾಳದ ವರೆಗೆ ಹೆಚ್ಚು ಸರ್ವೀಸ್ ರಸ್ತೆಗಳನ್ನು ನಿರ್ಮಿಸುವುದರೊಂದಿಗೆ ರಸ್ತೆಗಳ ಅಗಲೀಕರಣ ಮಾಡುವ ಯೋಜನೆಗ ರೂಪು ರೇಷೆಗಳನ್ನು ಬಿಬಿಎಂಪಿ ಸಿದ್ಧಪಡಿಸಿದೆ.
|