ಅಪ್ಪ-ಮಕ್ಕಳ ಪಕ್ಷವೆಂದೇ ಬಿಂಬಿತವಾಗಿರುವ ಜೆಡಿಎಸ್‌ನಿಂದ ಎಂ.ಪಿ.ಪ್ರಕಾಶ್ ಹೊರಬರುವುದು ಖಚಿತವಾಗಿದೆ. ತಾವು ಹೊಸ ಪಕ್ಷ ಕಟ್ಟುವುದಿಲ್ಲವೆಂದು ಪ್ರಕಾಶ್ ಹೇಳಿರುವ ಹಿನ್ನೆಲೆಯಲ್ಲಿ ಅವರು ಯಾವ ಪಕ್ಷಕ್ಕೆ ಸೇರಬಹುದು ಎನ್ನುವ ಕುತೂಹಲ ರಾಜಕೀಯ ವಲಯಗಳಲ್ಲಿ ಸಹಜವಾಗಿಯೇ ಇದೆ.
ಈಗ ಜೆಡಿಯು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಸೋಮಶೇಖರ್ ಪ್ರಕಾಶ್ರನ್ನು ತಮ್ಮ ಪಕ್ಷಕ್ಕೆ ಮರಳಲು ಆಹ್ವಾನಿಸಿದ್ದಾರೆ. 1999ರಲ್ಲಿ ಜನತಾದಳ ಪಕ್ಷವು ಹೋಳಾದಾಗ ಪ್ರಕಾಶ್ ಜೆಡಿಯುನಲ್ಲೇ ಉಳಿದಿದ್ದು ನಂತರವಷ್ಟೇ ದೇವೇಗೌಡರ ಜತೆ ಸೇರಿದ್ದರು. ಈಗಾಗಲೇ ದೇವೇಗೌಡರೊಂದಿಗಿನ ಸಂಬಂಧ ಹಳಸಿರುವ ಹಿನ್ನೆಲೆಯಲ್ಲಿ ಪ್ರಕಾಶ್‌ರೊಂದಿಗೆ ಒಂದೆರಡು ಸುತ್ತಿನ ಮಾತುಕತೆಗಳನ್ನು ಸೋಮಶೇಖರ್ ಮುಗಿಸಿದ್ದು, ಕೆಲ ದಿನಗಳಲ್ಲಿಯೇ ಇದಕ್ಕೆ ಅಂತಿಮ ರೂಪ ಸಿಗಲಿದೆ ಎಂದು ತಿಳಿದುಬಂದಿದೆ.
ನಮ್ಮದೇ ನಿಜವಾದ ಜನತಾದಳ ಎಂದು ಸುರೇಂದ್ರ ಮೋಹನ್ ಬಣದ ಜನತಾದಳ ಹೇಳುತ್ತಿದ್ದರೆ, ಜೆಡಿಎಸ್‌ಗೆ ರಾಜ್ಯದಲ್ಲಿ ಅದ್ಬುತ ನೆಲೆಗಟ್ಟಿದೆ ಎಂದು ಮೊನ್ನೆ ನಡೆದ ಕಾರ್ಯಕಾರಿಣಿಯಲ್ಲಿ ವಕ್ತಾರ ದತ್ತಾ ಹೇಳಿಕೊಂಡಿದ್ದಾರೆ. ಈ ಬಾರಿ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸ ಯಡಿಯೂರಪ್ಪನವರದು. ಸುಭದ್ರ ಸರ್ಕಾರ ತಮ್ಮಿಂದ ಮಾತ್ರ ಸಾಧ್ಯ ಎಂಬ ನಂಬುಗೆ ಕಾಂಗ್ರೆಸ್ಸಿಗರದು. ಅಸಹ್ಯ ರಾಜಕಾರಣ ಮಾಡಿದ ಈ ಮೂರೂ ಪಕ್ಷಗಳನ್ನು ತಿರಸ್ಕರಿಸುವ ಮತದಾರ ಈ ಬಾರಿ ಸಮಾಜವಾದಿ ಪಕ್ಷದ ಸೈಕಲ್ ಹತ್ತಲಿದ್ದಾನೆ ಎಂಬ ನೀರೀಕ್ಷೆ ಬಂಗಾರಪ್ಪನವರದು. ಕಾಂಗ್ರೆಸ್‌ಗೆ ಜೆಡಿಯು ಪಕ್ಷವೇ ಪರ್ಯಾಯ ಎಂಬ ಹೇಳಿಕೆ ಸೋಮಶೇಖರ್ ನೀಡಿದ್ದಾರೆ..
ಸದ್ಯದಲ್ಲಿಯೇ ಬರಲಿರುವ ಚುನಾವಣೆಗಳಲ್ಲಿ ಯಾರಿಗೆ ಯಾರು ಪರ್ಯಾಯ ಎಂದು ಮತದಾರ ಬಂಧುಗಳಷ್ಟೇ ನಿರ್ಧರಿಸಬೇಕಾಗಿದೆ.
|