ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ನನಗೆ ಯಾರದೂ ಮುಲಾಜಿಲ್ಲ : ಯಡಿಯೂರಪ್ಪ
ಜೆಡಿಎಸ್ ಕಾರ್ಯಕರ್ತರ ಸಮಾವೇಶವಾಯಿತು, ಕಾಂಗ್ರೆಸ್ ನಾಯಕರೂ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನು ಆಯೋಜಿಸಿದ್ದರು. ಈಗ ಅಧಿಕಾರವಂಚಿತ ಪಕ್ಷ ಬಿಜೆಪಿಯ ಸರದಿ.

ಯಾವಾಗ ಬೇಕಾದರೂ ಚುನಾವಣೆಗಳು ಘೋಷಣೆಯಾಗಲಿರುವ ಹಿನ್ನೆಲೆಯಲ್ಲಿ ತಂತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳನ್ನು ಹುರಿದುಂಬಿಸುವ ಅನಿವಾರ್ಯತೆ ಎಲ್ಲ ರಾಜಕೀಯ ಪಕ್ಷಗಳಲ್ಲಿದೆ. ಇದನ್ನು ಮನಗಂಡ ಬಿಜೆಪಿ ನಗರದ ಮರಾಠಾ ಭವನದಲ್ಲಿ ಬಿಜೆಪಿ ರಾಜ್ಯ ಪ್ರತಿನಿಧಿಗಳ ಸಮಾವೇಶವನ್ನು ಏರ್ಪಡಿಸಿತ್ತು.

ಮುಂಬರುವ ಚುನಾವಣೆಯಲ್ಲಿ ಅನುಸರಿಸಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ಅಧಿಕಾರ ಹಸ್ತಾಂತರವಾಗುವ ಸಂದರ್ಭದಲ್ಲಿ ಉಂಟಾದ ಗೊಂದಲ-ಅವಾಂತರಗಳ ವಿವರಗಳನ್ನು ಆವೇಶಭರಿತ ಯಡಿಯೂರಪ್ಪನವರು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದು ಸಭೆಯ ವಿಶೇಷವಾಗಿತ್ತು.

ಪಕ್ಷದಲ್ಲಿ ಒಡಕು ಮೂಡಿಸಲು ಅಪಪ್ರಚಾರ ನಡೆಸಲಾಗುತ್ತಿದೆ. ಈ ಪಿತೂರಿಗಳನ್ನು ನಂಬದಿರಿ ಎಂದು ಕಾರ್ಯಕರ್ತರನ್ನು ಕೇಳಿಕೊಂಡ ಯಡಿಯೂರಪ್ಪ ತಮ್ಮ ನಾಯಕತ್ವಕ್ಕೆ 129 ಶಾಸಕರು ಬೆಂಬಲ ಸೂಚಿಸಿ ಮುಚ್ಚಳಿಕೆ ಬರೆದುಕೊಟ್ಟಾಗಲೂ ವಿಶ್ವಾಸ ದ್ರೋಹ ಮಾಡಿದ ಜೆಡಿಎಸ್ ನಡವಳಿಕೆಯನ್ನು ಖಂಡಿಸಿದರು.

ನಡೆದಾಡುವ ದೇವರೆಂದೇ ಹೆಸರಾದ ಸಿದ್ಧಗಂಗಾ ಮಠಾಧೀಶರನ್ನೂ ಜೆಡಿಎಸ್‌ನವರು ಅವಹೇಳನ ಮಾಡಿದ್ದಾರೆ. ರಾಜಕಾರಣದಿಂದ ದೂರವಿರಿ ಎಂದೂ ಮಠಾಧಿಪತಿಗಳಿಗೆ ಉಪದೇಶ ನೀಡುವಷ್ಟು ಉದ್ಧಟತನ ತೋರಿದ್ದಾರೆ. ಆದಿ ಚುಂಚನಗಿರಿ ಸ್ವಾಮೀಜಿಗಳು, ಪೇಜಾವರ ಮಠಾಧೀಶರು ಕಾಲಾನುಕಾಲಕ್ಕೆ ನೀಡಿದ ಸಲಹೆ ಸೂಚನೆಗಳನ್ನು ಪಾಲಿಸಿಕೊಂಡು ಬಂದವರು ತಾವು. ಕಾದು ನೋಡುವಂತೆ ಈ ಮಠಾಧೀಶರು ಒತ್ತಾಯಿಸಿದ್ದಕ್ಕೇ ತಾವು ಒಪ್ಪಿದ್ದು. ಇಷ್ಟಾಗಿಯೂ ಜೆಡಿಎಸ್ ವಿಶ್ವಾಸದ್ರೋಹ ಮಾಡಿದೆ ಎಂದು ಯಡಿಯೂರಪ್ಪ ವಾಗ್ದಾಳಿ ಮಾಡಿದರು.

ಈ ಯಡಿಯೂರಪ್ಪನಿಗೆ ಯಾರದೂ ಮುಲಾಜಿಲ್ಲ, ಅಧಿಕಾರಕ್ಕೆ ಅಂಟಿಕೊಳ್ಳುವ ಇಚ್ಛೆಯೂ ಇಲ್ಲ ಎಂದು ಹೇಳುವಾಗ ಜೆಡಿಎಸ್ ವಿಶ್ವಾಸ ದ್ರೋಹಕ್ಕೆ ಛಲದ ಉತ್ತರ ನೀಡಿದ ಭಾವವಿತ್ತು ಯಡಿಯೂರಪ್ಪನವರಲ್ಲಿ.
ಮತ್ತಷ್ಟು
ಕನ್ನಡಕ್ಕೆ ದಕ್ಕದ ಸ್ಥಾನಮಾನ : ವಾಟಾಳ್ ಪ್ರತಿಭಟನೆ
ಮರಳಿ ಬನ್ನಿ : ಪ್ರಕಾಶ್‌ಗೆ ಜೆಡಿ(ಯು) ಆಹ್ವಾನ
ರಾಜಕೀಯ ಸಿನಿಮಾ ಅಲ್ಲ: ಎಂ.ಪಿ.ಪ್ರಕಾಶ್
ಸಂಚಾರ ದಟ್ಟಣೆ ಕಡಿವಾಣಕ್ಕೆ ವಿನೂತನ ಕ್ರಮ
ಅಂತಾರಾಷ್ಟ್ತ್ರೀಯ ವಿಮಾನನಿಲ್ದಾಣಕ್ಕೆ ರಸ್ತೆಸೌಲಭ್ಯ
ಸರ್ಕಾರದ ಮುಖ್ಯ ಕಾರ್ಯದರ್ಶಿ ಬದಲಾವಣೆ