ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕೃಷ್ಣಪೂಜೆ ನಡೆಸಲು ಬಹುಮತವಿದೆ : ಪುತ್ತಿಗೆಶ್ರೀ
ಉಡುಪಿಯ ಪರ್ಯಾಯ ಪೀಠಾರೋಹಣ ವಿವಾದ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ತಾನೇ ಪೇಜಾವರ ಮಠಾಧೀಶರು ಮತ್ತವರ ಬೆಂಬಲಿಗ ಮಠಾಧೀಶರು ಪುತ್ತಿಗೆ ಶ್ರೀಗಳು ಪರ್ಯಾಯ ಪೀಠಾರೋಹಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬ್ರಹ್ಮ ಪುರಾಣ, ವಿಷ್ಣು ಪುರಾಣ, ಧರ್ಮಸಿಂಧುವಿನಲ್ಲಿ ಹೇಳಿರುವಂತೆ ಸನ್ಯಾಸಿಗಳಿಗೆ ಸಾಗರೋಲ್ಲಂಘನೆ ಸಲ್ಲದು, ಒಂದು ವೇಳೆ ಸಾಗರೋಲ್ಲಂಘನೆ ನಡೆಸಿದರೆ ಅಂತಹ ಸನ್ಯಾಸಿಗಳು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎನ್ನುತ್ತದೆ ಎಂದು ವಾದಿಸುತ್ತಾರೆ ಒಂದು ಬಣದ ಪ್ರತಿನಿಧಿಗಳು.

ಸನ್ಯಾಸಿಗಳು ಕರ್ಮಭ್ರಷ್ಠರಾಗಕೂಡದು ಅವರಿಗಾಗೇ ರೂಪಿಸಿದ ಚೌಕಟ್ಟಿನ ಇತಿ ಮಿತಿಗಳೊಳಗೆ ಇರಬೇಕು ಎಂದು ವಾದಿಸುವ ಈ ತಂಡ ಈ ಹಿಂದಿನ ಪೇಜಾವರ ಮಠದ ಕಿರಿಯ ಸ್ವಾಮಿಗಳು ವಿದೇಶ ಯಾತ್ರೆ ಕೈಗೊಂಡಿದ್ದಕ್ಕಾಗಿ ಅವರನ್ನು ಮಠದಿಂದ ಬಹಿಷ್ಕರಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಪರ್ಯಾಯ ಪೀಠಾರೋಹಣ ವಿವಾದಕ್ಕೆ ಮಂಗಳಹಾಡಲು ಸೂತ್ರವೊಂದನ್ನು ಮಂಡಿಸಿದ್ದರು. ಅದೆಂದರೆ ಪರಂಪರಾಗತ ನಿಯಮಗಳಂತೆ ಪರ್ಯಾಯ ಪೀಠಕ್ಕೆ ಪುತ್ತಿಗೆ ಶ್ರೀಗಳಿಗೆ ಅನುಮತಿ ಕೊಡುವುದು ಆದರೆ ಅವರು ಸೀಮೋಲ್ಲಂಘನೆ ಮಾಡಿರುವುದರಿಂದ ಮೂಲದೇವರಾದ ಶ್ರೀಕೃಷ್ಣನ ಪೂಜೆಗೆ ಅವಕಾಶ ಕೊಡಬಾರದು ಎಂದು ಹೇಳಿದ್ದರು. ಇದಕ್ಕೆ ಅಷ್ಠ ಮಠಗಳಲ್ಲಿ ಆರು ಮಠದ ಮಠಾಧೀಶರಿಂದ ಬೆಂಬಲವೂ ಸಹ ವ್ಯಕ್ತವಾಗಿತ್ತು.

ಪೇಜಾವರ ಶ್ರೀಗಳ ಈ ಹೇಳಿಕೆಯನ್ನು ತೀವ್ರವಾಗಿ ಪ್ರತಿಭಟಿಸಿರುವ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಶ್ರೀಮಠದಲ್ಲಿ ಶ್ರೀಕೃಷ್ಣ ಪೂಜೆ ನಡೆಸಲು ನನಗೆ ಎಲ್ಲಾ ಹಕ್ಕಿದೆ. ಒಂದು ಪಂಗಡ ಹೇಳಿಕೊಳ್ಳುತ್ತಿರುವಂತೆ ಅಷ್ಠಮಠಗಳಲ್ಲಿ ನನ್ನ ಧ್ವನಿಗೆ ವಿರೋಧವಿದೆ ಅವರ ವಾದಕ್ಕೆ ಬಹುಮತವಿದೆ ಎಂಬ ಅಂಶವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಶ್ರೀಕೃಷ್ಣ ಪೂಜೆ ಸರ್ವಸಂಗ ತ್ಯಾಗಿಗಳಾದ ನಮ್ಮ ಹಕ್ಕು ಅದನ್ನು ಪ್ರಶ್ನಿಸಲು ಯಾರಿಗೂ ಅಧಿಕಾರವಿಲ್ಲ ಎಂದು ಹೇಳುವುದರ ಮೂಲಕ ಪರ್ಯಾಯ ಪೀಠಾರೋಹಣದ ವಿವಾದವನ್ನು ಮತ್ತಷ್ಟು ಜಟಿಲಗೊಳಿಸಿದ್ದಾರೆ.
ಮತ್ತಷ್ಟು
ಸಿಲಿಂಡರ್ ಸ್ಪೋಟ: ಒಬ್ಬನ ಸಾವು
ರಾಮಸ್ವಾಮಿ ಕಾರ್ಯವೈಖರಿ ಪ್ರಜಾಪ್ರಭುತ್ವ ವಿರೋಧಿ: ಉಗ್ರಪ್ಪ
ರಾಮಸ್ವಾಮಿ ವಿರುದ್ಧ ಉಗ್ರಪ್ರತಾಪ: ಪೊಲೀಸರಿಗೆ ದೂರು
ನನಗೆ ಯಾರದೂ ಮುಲಾಜಿಲ್ಲ : ಯಡಿಯೂರಪ್ಪ
ಕನ್ನಡಕ್ಕೆ ದಕ್ಕದ ಸ್ಥಾನಮಾನ : ವಾಟಾಳ್ ಪ್ರತಿಭಟನೆ
ಮರಳಿ ಬನ್ನಿ : ಪ್ರಕಾಶ್‌ಗೆ ಜೆಡಿ(ಯು) ಆಹ್ವಾನ