ತಮ್ಮ ವಿರುದ್ಧ ಹಗರಣಗಳ ಸುರಿಮಳೆಯನ್ನೇ ಸುರಿದಿದ್ದ ಬಿಜೆಪಿ ನಾಯಕರ ವಿರುದ್ದ ಹರಿ ಹಾಯ್ದಿರುವ ಕುಮಾರಸ್ವಾಮಿ ತಾಖತ್ತಿದ್ದರೆ ದಾಖಲೆಗಳ ಸಮೇತ ಮುಂದೆ ಬರಲಿ ಎಂದು ಆಗ್ರಹಿಸಿದ್ದಾರೆ. ಮೈನಿಂಗ್, ಭೂಕಬಳಿಕೆ ಹಗರಣಗಳಲ್ಲಿ ತಮ್ಮ ಕೈವಾಡವಿರುವುದರ ಬಗ್ಗೆ ಕೆಲ ಬಿಜೆಪಿ ನಾಯಕರು ಗೇಲಿ ಮಾಡಿದ್ದು ಕುಮಾರಸ್ವಾಮಿಯವರ ಕಣ್ಣನ್ನು ಕೆಂಪಾಗಿಸಿದೆ.
ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನನ್ನ ಆಡಳಿತಾವಧಿಯಲ್ಲಿ ಪಾರದರ್ಶಕವಾಗಿ ಆಡಳಿತ ನಡೆಸಿದ್ದೇನೆ ನನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಬಿಜೆಪಿ ನಾಯಕರು ಧೈರ್ಯವಿದ್ದರೆ ದಾಖಲೆಗಳ ಸಮೇತ ಮುಂದೆ ಬರಲಿ, ಬಹಿರಂಗ ಚರ್ಚೆಗೆ ಸಿದ್ದ ಎಂದು ಗುಡುಗಿದ್ದಾರೆ.
ಮರಳಿ ಗೂಡಿಗೆ : ಈ ಮಧ್ಯೆ ಸ್ವಾಮೀಜಿಗಳ ವಿರುದ್ಧ ತಾವು ನಡೆಸಿದ ಟೀಕಾಪ್ರಹಾರವನ್ನು ಸಮರ್ಥಿಸಿಕೊಂಡ ಅವರು ನನಗೆ ಮಠಾಧೀಶರ ಬಗ್ಗೆ ಅಪಾರ ಗೌರವವಿದೆ ನಾನು ವ್ಯಕ್ತಿಗತವಾಗಿ ಯಾರನ್ನೂ ನೋಯಿಸಿಲ್ಲ ಮಠಗಳು ಧರ್ಮಜಾಗೃತಿಗಷ್ಟೇ ಮೀಸಲಾಗಿರಬೇಕು, ರಾಜಕೀಯದಲ್ಲಿ ಹಸ್ತಕ್ಷೇಪ ನಡೆಸಬಾರದು ಎಂದಷ್ಟೇ ಹೇಳಿದ್ದೆ ಎಂದು ಸಮರ್ಥಿಸಿಕೊಂಡರು.
ಪಕ್ಷ ಒಡೆಯುವತ್ತ ಸಾಗಿದೆ ಎಂಬ ಮಾತುಗಳನ್ನು ತಳ್ಳಿಹಾಕಿದ ಅವರು ಅತೃಪ್ತರ ಮನ ಒಲಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಪಕ್ಷದ ನಿಲುವುಗಳನ್ನು ಅವರಿಗೆ ಮನದಟ್ಟು ಮಾಡಿಕೊಳ್ಳಲು ಯತ್ನಿಸುತ್ತಿದ್ದೇನೆ ಈಗಾಗಲೇ ನಮ್ಮ ಬಣದಿಂದ ಹಿಂದೆ ಸರಿದಿದ್ದ 20 ಶಾಸಕರಲ್ಲಿ 10 ಶಾಸಕರು ಮರಳಿ ನಮ್ಮ ಗೂಡಿಗೆ ಬಂದಿದ್ದಾರೆ ವಾಸ್ತವಾಂಶ ಅವರಿಗೆ ಅರಿವಾಗಿದೆ ಎಂದರು.
|