ಜೆಡಿ(ಎಸ್)ನಲ್ಲಿ ಅಸಮಾಧಾನದ ಹೊಗೆಯೆಬ್ಬಿಸಿ ತಾವು ಇನ್ನು ಜೆಡಿ(ಎಸ್)ನಲ್ಲಿ ಮುಂದುವರೆಯುವುದಿಲ್ಲ ಎಂದಿದ್ದ ಹಿರಿಯ ರಾಜಕೀಯ ಮುತ್ಸದ್ದಿ ಎಂ.ಪಿ.ಪ್ರಕಾಶ್ ಅವರ ಮನೆ ಬಾಗಿಲನ್ನು ಈಗಾಗಲೇ ಹಲವಾರು ಮುಖಂಡರು ತಟ್ಟಿದ್ದಾರೆ. ರಾಜ್ಯದಲ್ಲಿ ತನ್ನ ನೆಲೆಯೂರಲು ಪ್ರಯತ್ನಪಡುತ್ತಿರುವ ಬಿ.ಎಸ್.ಪಿ. ಸಹ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ.
ಸಮರ್ಥ ನಾಯಕತ್ವವಿಲ್ಲದೇ ಎಳೆಯ ಅವಸ್ಥೆಯಲ್ಲಿರುವ ಬಿ.ಎಸ್.ಪಿ. ಇದೀಗ ಚುನಾವಣಾ ಕಾವು ಏರತೊಡಗಿದಂತೆ ತನ್ನ ಕಾರ್ಯತಂತ್ರ ರೂಪಿಸಲು ಸಜ್ಜಾಗಿದೆ. ಪಿ.ಜಿ.ಆರ್. ಸಿಂಧ್ಯರವರಂತಹ ವರ್ಚಸ್ವಿ ನಾಯಕರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡ ಮೇಲೆ ಅದರ ಕಣ್ಣು ಇದೀಗ ಎಂ.ಪಿ.ಪ್ರಕಾಶ್ ಮತ್ತು ಮತ್ತಿತರ ಸಮಾನ ಮನಸ್ಕರ ಮೇಲೆ ಬಿದ್ದಿದೆ.
ಬಿ.ಎಸ್.ಪಿ. ರಾಜ್ಯಾಧ್ಯಕ್ಷ ಗೋಪಾಲ್ ಹಾಗೂ ಪಿ.ಜಿ.ಆರ್. ಸಿಂಧ್ಯರವರು ಇಂದು ಎಂ.ಪಿ.ಪ್ರಕಾಶ್ರವರನ್ನು ಭೇಟಿ ಮಾಡಿ ಸುಧೀರ್ಘ ಚರ್ಚೆ ನಡೆಸಿದರು. ಮಾತುಕತೆಯ ಸಂದರ್ಭದಲ್ಲಿ ವಿದ್ಯುಕ್ತವಾಗಿ ತಮ್ಮ ಸಮಾನ ಮನಸ್ಕರೊಡನೆ ಬಿ.ಎಸ್.ಪಿ.ಯ ವೇದಿಕೆ ಹಂಚಿಕೊಳ್ಳಲು ಸಹ ಆಮಂತ್ರಿಸಿದರು ಎನ್ನಲಾಗಿದೆ.
ಆದರೆ ಪ್ರಕಾಶ್ರವರು ಬಿ.ಎಸ್.ಪಿ.ಯನ್ನು ಸೇರುತ್ತಾರೆಯೇ ಇಲ್ಲವೇ ಎಂಬುದು ಇನ್ನೂ ನಿಚ್ಛಳವಾಗಿ ಗೊತ್ತಾಗಿಲ್ಲ. ಪ್ರಕಾಶ್ ಅವರ ತೀರ್ಮಾನ ಇನ್ನು ಒಂದೆರಡು ದಿನಗಳಲ್ಲೇ ಗೊತ್ತಾಗಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
|