ಬಿಜೆಪಿಯ ಮಾಜಿ ಸಂಸದ ಹಾಗೂ ಪ್ರತಿಷ್ಠಿತ ವಿಆರ್ಎಲ್ ಸಮೂಹದ ಆದ್ಯಕ್ಷ ವಿಜಯ ಸಂಕೇಶ್ವರ್ ಅವರು ಮತ್ತೆ ಬಿಜೆಪಿ ಸೇರುವ ನಿರ್ದಾರ ಪ್ರಕಟಿಸಿದ್ದಾರೆ. ಖಾಸಗಿ ಟಿ.ವಿ. ಚಾನೆಲ್ ಒಂದಕ್ಕೆ ದೂರವಾಣಿ ಮೂಲಕ ಮಾತನಾಡಿದ ಸಂಕೇಶ್ವರ್‌ರವರು ಈಗಿರುವ ಪಕ್ಷಗಳಲ್ಲಿ ಬಿಜೆಪಿಯೇ ಅತ್ಯುತ್ತಮವಾದ ಪಕ್ಷ ಎಂದು ಘೋಷಿಸಿದ್ದಾರೆ.
ಆಗ ಪಕ್ಷದೊಳಗಿದ್ದ ಭಿನ್ನಮತ, ನಾಯಕರುಗಳ ಹಪಾಹಪಿಯನ್ನು ತಣಿಸಲು ಒತ್ತಡದ ತಂತ್ರವಾಗಿ ಪಕ್ಷವನ್ನು ತೊರೆದಿದ್ದೆ. ಪಕ್ಷವನ್ನು ತೊರೆದಾದ ಮೇಲೆ ಸಾಕಷ್ಟು ಮಾನಸಿಕ ನೋವನ್ನು ಸಹ ಅನುಭವಿಸಿದ್ದೇನೆ. ಪ್ರಾದೇಶಿಕ ಪಕ್ಷವನ್ನು ಮಾಡಲಿಚ್ಚಿಸಿದೆನಾದರೂ ಅದಕ್ಕೆ ಶ್ರೀಸಾಮಾನ್ಯರ ಆಶೀರ್ವಾದ ದೊರೆಯಲಿಲ್ಲ. ರಾಷ್ಟ್ರೀಯ ಪಕ್ಷಗಳು ಎಂದಿದ್ದರೂ ರಾಷ್ಟ್ರೀಯ ಪಕ್ಷಗಳೇ. ಅವುಗಳಿಗಿರುವ ತತ್ವ ಸಿದ್ದಾಂತ ಪ್ರಾದೇಶಿಕ ಪಕ್ಷಗಳಿಗಿರುವುದಿಲ್ಲ. ಸಧ್ಯದ ಸ್ಥಿತಿಯಲ್ಲಿ ರಾಷ್ಟ್ರಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಬಿಜೆಪಿಯೊಂದೇ ಸ್ಥಿರವಾದ ಸದೃಢವಾದ ಪಕ್ಷ ಹಾಗಾಗಿ ಅದನ್ನು ಮತ್ತೆ ಸೇರಲಿಚ್ಚಿಸುತ್ತಿದ್ದೇನೆ ಎಂದರು.
ಉತ್ತರ ಕರ್ನಾಟಕದ ಭಾಗದಲ್ಲಿ ಸಾಕಷ್ಟು ಬೆಂಬಲ ಹೊಂದಿರುವ ವಿಜಯ ಸಂಕೇಶ್ವರರು ಒಬ್ಬ ನುರಿತ ರಾಜಕಾರಣಿ ಹಾಗೂ ಪ್ರಬುದ್ಧ ಉದ್ಯಮಿ ಎಂಬುದನ್ನು ಇಲ್ಲಿ ಗಮನಿಸಬಹುದು. ರಾಜ್ಯದ ಪ್ರಮುಖ ಜಾತಿಯಾದ ಲಿಂಗಾಯಿತ ವರ್ಗಕ್ಕೆ ಸೇರಿದ ವಿಜಯಸಂಕೇಶ್ವರರಿಗೆ ಆ ವರ್ಗದಲ್ಲಿರುವ ಜನಮನ್ನಣೆ ಬಿಜೆಪಿ ಪಾಲಿಗೆ ಮುಂದಿನ ಚುನಾವಣೆ ವರದಾನವಾಗುತ್ತದೆಯೋ ಎಂದು ಕಾದು ನೋಡಬೇಕಾಗಿದೆ.
|