ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದ್ಯದಲ್ಲಿಯೇ ಪುನರ್ ರಚನೆಗೊಳ್ಳಲಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ರಾಜ್ಯದ ಕಾಂಗ್ರೆಸ್ಸಿಗರಲ್ಲಿ ಉತ್ಸಾಹ ಗರಿಗೆದರಿದೆ.
ಎಐಸಿಸಿಯ ಮುಖಂಡರು ಗುಜರಾತ್ ಚುನಾವಣೆಯಲ್ಲಿ ಸಕ್ರಿಯರಾಗಿದ್ದರಿಂದ ಈ ಪ್ರಕ್ರಿಯೆ ತಡವಾಗಿತ್ತು. ಪುನಾರಚನೆ ವೇಳೆಗೆ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಸೋನಿಯಾ ಗಾಂಧಿಯವರು ಬಯಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಯಾವಾಗ ಬೇಕಾದರೂ ವಿಧಾನಸಭಾ ಚುನಾವಣೆಗಳು ಘೋಷಣೆಯಾಗುವ ವಾತಾವರಣವಿದೆ. ಆದರೆ ಈಗಿರುವ ಮಲ್ಲಿಕಾರ್ಜುನ ಖರ್ಗೆ - ಧರಂಸಿಂಗ್ - ಎಚ್.ಕೆ.ಪಾಟೀಲ್‌ರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದು ಸಾಧ್ಯವಿಲ್ಲ. ಎಸ್.ಎಂ.ಕೃಷ್ಣರಂತಹ ನಾಯಕರು ರಾಜ್ಯಕ್ಕೆ ಬೇಕು. ಇಲ್ಲದಿದ್ದರೆ ಪಕ್ಷ ಅವನತಿಯ ಹಾದಿ ಹಿಡಿಯುವುದು ಖಚಿತ ಎಂಬುದು ಕೆಲ ನಿಷ್ಠಾವಂತ ಕಾಂಗ್ರೆಸ್ಸಿಗರ ಅಭಿಮತ.
ಆದರೆ ಇದುವರೆಗೂ ಪಕ್ಷವನ್ನು ಕಷ್ಟಪಟ್ಟು ಕಟ್ಟಿದವರನ್ನು ಮೂಲೆಗುಂಪು ಮಾಡಿ, ಎಲ್ಲಿಂದಲೋ ನಾಯಕರನ್ನು ಕರೆತರುವುದು ಏಕೆ ಎಂಬುದು ಪಕ್ಷದ ಮತ್ತೊಂದು ವಲಯದ ಅಭಿಪ್ರಾಯ. ಈ ನಿಟ್ಟಿನಲ್ಲಿ ಖರ್ಗೆಯವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಲಿ ಎಂದು ಒತ್ತಾಯಿಸಲು ಯುವ ನಾಯಕ ದಿನೇಶ್ ಗುಂಡೂರಾವ್ ದೆಹಲಿಗೆ ದೌಡಾಯಿಸಿದ್ದಾರೆ.
|