ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಪಾಂಚಜನ್ಯ ಊದಲು ಎಸ್.ಎಂ.ಕೃಷ್ಣ ಒಲವು ತೋರಿದ್ದಾರೆಯೇ? ರಾಜಕೀಯ ಹವಾಮಾನದ ವರದಿಗಳನ್ನು ನಂಬುವುದಾದರೆ ಆ ದಿನಗಳು ದೂರವಿಲ್ಲ ಎಂದೇ ಅರ್ಥೈಸಬೇಕಾಗುತ್ತದೆ.
ಪಕ್ಷದ ಹೈಕಮಾಂಡ್ ಒತ್ತಾಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ತ್ರದ ರಾಜ್ಯಪಾಲರಾಗಿ ನಿಯುಕ್ತರಾಗಿದ್ದ ಕೃಷ್ಣರಿಗೆ ಆ ಹುದ್ದೆಯೆಡೆಗೆ ಅಷ್ಟೇನೂ ಆಸಕ್ತಿ ಇರಲಿಲ್ಲ ಎಂಬುದು ಎಲ್ಲರೂ ಗೊತ್ತಿದ್ದ ವಿಷಯವೇ ಆಗಿತ್ತು. ಅದರೆ ಸಮಯ ನೋಡಿ ದಾಳ ಉರುಳಿಸುವ ಹಾಗೂ ಯಾವುದೇ ಚಿಂತನೆಗಳನ್ನು ತಮ್ಮದೇ ಹೈಟೆಕ್ ಶೈಲಿಯಲ್ಲಿ ಬಿಂಬಿಸುವ ಕೃಷ್ಣ ಯಾವುದಕ್ಕೂ ದುಡುಕದೆ, ಒಪ್ಪಿಸಿದ ರಾಜ್ಯಪಾಲರ ಜವಾಬ್ದಾರಿಯನ್ನು ವಹಿಸಿಕೊಂಡರು.
ತೂಕಡಿಸುವವರ ಪಕ್ಷವೆಂದೇ ಗೇಲಿಗೊಳಗಾಗಿರುವ ಕಾಂಗ್ರೆಸ್‌ಗೆ ಅಗ್ರೆಸಿವ್ ನಾಯಕನೊಬ್ಬ ಬೇಕಾಗಿದ್ದಾನೆ. ಆದರೆ ಆತನ ಅಗ್ರೆಸಿವ್ನೆಸ್ ಜನರಿಗೆ ಹುಂಬತನದಂತೆ ಕಾಣದಿರುವಂಥ ಎಚ್ಚರಿಕೆಯನ್ನೂ ಆತ ಹೊಂದಿರಬೇಕಾಗುತ್ತದೆ. ಆತ ಪಕ್ಷಕ್ಕೊಂದು ಗ್ಲಾಮರ್ ತಂದುಕೊಡಬೇಕಾಗುತ್ತದೆ.
ಜೆಡಿಎಸ್‌ನವರ ಆಕ್ರಮಣಕಾರಿ ಶೈಲಿಯ ಮಾತುಗಳು ಹಾಗೂ ಬಿಜೆಪಿಯವರ ಕೇಸರಿ ಲೇಪಿತ ಮಾತುಗಳಿಗೆ ಡಿಪ್ಲೊಮ್ಯಾಟಿಕ್ ಆಗಿ ಉತ್ತರಿಸುವುದು ಆತನಿಗೆ ಗೊತ್ತಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೃಷ್ಣರೇ ಸೂಕ್ತ ಅಯ್ಕೆ ಎಂದು ಹಲವು ಉತ್ಸಾಹಿ ಕಾಂಗ್ರೆಸ್ಸಿಗರು ಬಯಸಿರುವುದು ಸಹಜವೇ ಆಗಿದೆ.
ಮಹಾರಾಷ್ಟ್ರವೆಂಬ ದ್ವಾರಕೆಗೆ ತೆರಳಿದ್ದ ಕೃಷ್ಣ, ಕರ್ನಾಟಕವೆಂಬ ನಂದಗೋಕುಲಕ್ಕೆ ಮರಳುವರೇ? ಇದೇ ಸದ್ಯದ ಕುತೂಹಲ.
|