20 ತಿಂಗಳ ಕಾಲಾವಧಿಯ ಜೆಡಿಎಸ್-ಬಿಜೆಪಿ ಸರ್ಕಾರದ ಲೋಪದೋಷಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕೆಂದು ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯ್ಲಿ ಮಂಗಳವಾರ ಆಗ್ರಹಿಸಿದ್ದಾರೆ. "ವಿವಿಧ ರಾಜಕೀಯ ಪಕ್ಷಗಳು ಮಾಡುತ್ತಿರುವ ಆರೋಪಗಳಲ್ಲಿ ಸಾಕಷ್ಟು ನಿಜಾಂಶವಿದೆ.
ಸಮ್ಮಿಶ್ರ ಕೂಟದ ಆಡಳಿತಾವಧಿಯಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಪೂರ್ಣವಿರಾಮ ಬಿದ್ದಿತು" ಎಂದು ಅವರು ನುಡಿದಿದ್ದಾರೆ. ಸಮ್ಮಿಶ್ರ ಸರ್ಕಾರ ಸುಗಮ ನಿರ್ವಹಣೆಗೆ ವಿಫಲವಾಗಿದ್ದರಿಂದ ರಾಜ್ಯದಲ್ಲಿ ಸ್ಥಿರ ಸರ್ಕಾರ ಒದಗಿಸುವುದು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ ಎಂದು ಅವರು ನುಡಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ ಮೊಯ್ಲಿ ಅದು ನಾಯಕತ್ವದ ಕೊರತೆಯಿಂದ ಬಳಲುತ್ತಿದೆ ಎಂದು ಹೇಳಿ ಬಿಜೆಪಿ ವರಿಷ್ಠ ಮಂಡಳಿ ರಾಜ್ಯದಲ್ಲಿ ನಾಯಕರನ್ನು ಸಡಿಲವಾಗಿ ಬಿಟ್ಟಿದೆ ಎಂದು ಟೀಕಿಸಿದರು.
ಬಿಜೆಪಿ ನಾಯಕತ್ವ ಮತ್ತು ಶಿಸ್ತು ಎರಡನ್ನೂ ಕಳೆದುಕೊಂಡಿದ್ದು, ಯಡಿಯೂರಪ್ಪ ನಾಯಕತ್ವದ ಲಕ್ಷಣಗಳನ್ನು ಹೊಂದಿಲ್ಲವೆಂದು ಹೇಳಿದರು.ಮಹಾರಾಷ್ಟ್ರ ರಾಜ್ಯಪಾಲ ಕೃಷ್ಣ ಅವರ ಅನುಯಾಯಿಗಳು ಅವರನ್ನು ಚುನಾವಣೆಯ ಮುಂದಾಳು ಎಂದು ಬಿಂಬಿಸಿರುವ ಬಗ್ಗೆ, ಯಾವುದೇ ಅಭಿಪ್ರಾಯವನ್ನು ವರಿಷ್ಠಮಂಡಳಿಯ ಗಮನಕ್ಕೆ ಮುಂಚೆಯೇ ತರಬೇಕೆಂದು ಹೇಳಿದರು.
ಮಂಗಳೂರು ವಿಶೇಷ ಆರ್ಥಿಕ ಯೋಜನೆಗೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು ಯೋಜನೆಗೆ ಪಕ್ಷದ ವಿರೋಧವಿಲ್ಲ. ಆದರೆ ರೈತರ ಹಿತಾಸಕ್ತಿಯನ್ನು ಕಡೆಗಣಿಸಬಾರದು ಎಂದು ನುಡಿದರು.ಬೈಂದೂರು-ಶಿರೂರು ನಡುವೆ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ನಾಲ್ಕು ಲೇನ್ ರಸ್ತೆ ನಿರ್ಮಾಣ ಯೋಜನೆಯ ಸಮೀಕ್ಷೆ ಕಾರ್ಯ ಮಂಜೂರಾತಿಯ ಹಂತದಲ್ಲಿದೆ ಎಂದು ಅವರು ನುಡಿದರು.
|