ಪೋಲಿಯೊ ಪ್ರಕರಣವೊಂದನ್ನು ಗುರುತಿಸಿರುವ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳು ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮವನ್ನು ತೀವ್ರಗೊಳಿಸಿದ್ದಾರೆ. ಸುಮಾರು ಮೂರು ವರ್ಷಗಳ ಅಂತರದ ಬಳಿಕ ಪೋಲಿಯೊ ಪ್ರಕರಣವೊಂದನ್ನು ಗುರುತಿಸಲಾಗಿದೆ.
2003ರಲ್ಲಿ ಬಳ್ಳಾರಿಯಲ್ಲಿ ಪೋಲಿಯೊ ಪ್ರಕರಣಗಳನ್ನು ಗುರುತಿಸಲಾಗಿದ್ದು, 2004ರಿಂದೀಚೆಗೆ ರಾಜ್ಯ ಪೋಲಿಯೊ ಮುಕ್ತ ಎಂದು ಘೋಷಿಸಲಾಯಿತು. ಇತ್ತೀಚೆಗೆ ಪೋಲಿಯೊ ಪ್ರಕರಣ ಗುರುತಿಸಿರುವ ಹಿನ್ನೆಲೆಯಲ್ಲಿ ರೋಟರಿ ಇಂಟರ್‌ನ್ಯಾಷನಲ್ ಸಹಯೋಗದೊಂದಿಗೆ ರಾಜ್ಯಸರ್ಕಾರವು ವಿಶೇಷ ಲಸಿಕೆ ಕಾರ್ಯಕ್ರಮವನ್ನು ಡಿ.9ರಂದು ಹಮ್ಮಿಕೊಂಡಿದೆ.
ಉತ್ತರಪ್ರದೇಶದಿಂದ ವಲಸೆ ಬಂದಿದ್ದ ಬುಡಕಟ್ಟು ಜನಾಂಗಕ್ಕೆ ಸೇರಿದ 2 ವರ್ಷದ ಬಾಲಕ ಪೋಲಿಯೊ ವೈರಸ್‌ನಿಂದ ಪೀಡಿತನಾಗಿದ್ದಾನೆಂದು ಗುರುತಿಸಲಾಗಿದೆ. ನ.29ರಂದು ಝೀಶನ್ ಎಂಬ ಈ ಬಾಲಕನನ್ನು ಜ್ವರದಿಂದ ಆಸ್ಪತ್ರೆಗೆ ಸೇರಿಸಿದಾಗ ಈ ಪ್ರಕರಣವು ಬೆಳಕಿಗೆ ಬಂತು. ಮಗು ತನ್ನ ಹುಟ್ಟೂರಾದ ಫೈಜಾಬಾದ್‌ನಲ್ಲಿ ಪೋಲಿಯೊ ಸೋಂಕಿಗೆ ಒಳಗಾಗಿರಬಹುದೆಂದು ಶಂಕಿಸಲಾಗಿದೆ.
ಅವನ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿವೆಯೆಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಯಶವಂತಪುರದ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದ ಕುಟುಂಬ ಅದಾದ ಬಳಿಕ ಆ ಸ್ಥಳವನ್ನು ತ್ಯಜಿಸಿದೆ. 64 ಕುಟುಂಬಗಳು ವಾಸವಿರುವ ಯಶವಂತಪುರದ ಕೊಳೆಗೇರಿಯಲ್ಲಿ 78 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗಿದೆ. ಇದಕ್ಕೆ ಮುಂಚೆ ಈ ಮಕ್ಕಳು ಲಸಿಕೆ ಹಾಕುವ ಕಾರ್ಯಕ್ರಮದಡಿ ಇರಲಿಲ್ಲ ಎಂದು ರಾಷ್ಟ್ರೀಯ ಪೋಲಿಯೊ ಸರ್ವೇಕ್ಷಣೆ ಯೋಜನೆ ತಿಳಿಸಿದೆ.
|