ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬುದು ರಾಜ್ಯ ಬಿಜೆಪಿ ವಿಷಯದಲ್ಲಿ ಕೊಂಚವಾದರೂ ನಿಜವಾಗುವಂತೆ ತೋರುತ್ತಿದೆ. ಅಧಿಕಾರ ಹಸ್ತಾಂತರವಾಗದ್ದರಿಂದ ಜನರ ಅನುಕಂಪ ಗಳಿಸಿದ್ದ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದ್ದಿದ್ದರೆ ಜನರ ಎದುರಿಗೆ ಅದು ತನ್ನತನವನ್ನು ಬಿಂಬಿಸಿಕೊಳ್ಳಬಹುದಿತ್ತು. ಟಿಕೆಟ್ ಹಂಚುವುದರಿಂದ ಮೊದಲುಗೊಂಡು ಚುನಾವಣಾ ರಣನೀತಿಯ ಕುರಿತೂ ನಿಖರತೆಯನ್ನು ತೋರಬಹುದಿತ್ತು.
ಆದರೆ ಯಡಿಯೂರಪ್ಪನವರ ವಿರುದ್ಧ ಎದ್ದ ಅಸಮಾಧಾನದ ಹೊಗೆ ಭಿನ್ನಮತದ ಸ್ವರೂಪವನ್ನು ತಳೆದು ಪಕ್ಷದ ಇಮೇಜಿಗೆ ಹಾನಿಯಾಗಲಾರಂಭಿಸಿತು. ಚುನಾವಣೆ ಸಮಯದಲ್ಲಿ ಯಾವುದೇ ಪಕ್ಷಕ್ಕೂ ಇದು ಅನಪೇಕ್ಷಣೀಯವಾದ್ದರಿಂದ ಪಕ್ಷದ ವರಿಷ್ಠರು ಲಗಾಮನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಕೇಂದ್ರಾಡಳಿತ ಅನುಷ್ಠಾನಗೊಳ್ಳಲಿದೆ. ಇದರ ಮೊದಲ ಹಂತವಾಗಿ ಮುಂಬರುವ ಚುನಾವಣೆಗೆ ಪಕ್ಷದ ಕೇಂದ್ರೀಯ ಘಟಕವೇ ಸೂಕ್ತ ಅಭ್ಯರ್ಥಿಗಳನ್ನು ಗುರುತಿಸಿ ಟಿಕೆಟ್ ಹಂಚಲು ನಿರ್ಧರಿಸಿದೆ. ಇದರಿಂದ ಅನವಶ್ಯಕ ವಶೀಲಿ ಬಾಜಿಗಾಗಲೀ ಸ್ವಜನ ಪಕ್ಷಪಾತಕ್ಕಾಗಲೀ ಆಸ್ಪದವಿರುವುದಿಲ್ಲ ಎಂಬುದು ಪಕ್ಷದ ವರಿಷ್ಠರ ಅಭಿಮತ.
ಪಕ್ಷದೊಳಗಿನ ಭಿನ್ನಮತ ಹಾಗೂ ವೈಮನಸ್ಯಗಳನ್ನು ದೂರಮಾಡುವಲ್ಲಿನ ವರಿಷ್ಠರ ಈ ತೀರ್ಮಾನ ಎಷ್ಟರಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.
|