ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿರ್ಮಿಸಿ ನಿರ್ದೇಶಿಸುತ್ತಿರುವ ಮುಖ್ಯಮಂತ್ರಿ ಐ ಲವ್ ಯೂ ಚಿತ್ರದ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ.ಬೆಂಗಳೂರಿನ ಪದ್ಮನಾಭನಗರದಲ್ಲಿರುವ ರವಿ ಬೆಳಗೆರೆಯವರ ಹಾಯ್ ಬೆಂಗಳೂರು ಪತ್ರಿಕಾಲಯದ ಎದುರು ಜಮಾವಣೆಗೊಂಡ ಜೆಡಿಎಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಒಕ್ಕಲಿಗರು ಗೌರವಾನ್ವಿತವಾಗಿ ಜೀವನ ನಡೆಸುತ್ತಿದ್ದಾರೆ. ಅಂಥಾದ್ದರಲ್ಲಿ ಒಂದು ಕೋಮಿನ, ಕುಟುಂಬದ ತೇಜೋವಧೆ ಮಾಡುವ ಇಂಥ ಪ್ರಯತ್ನಗಳು ಒಳ್ಳೆಯ ಅಭಿರುಚಿಯನ್ನು ಬಿಂಬಿಸುವುದಿಲ್ಲ. ಚಿತ್ರದ ಕೆಲ ಪಾತ್ರಗಳಿಗೆ ಇಟ್ಟಿರುವ ಹೆಸರುಗಳು ಪಕ್ಷದ ನಾಯಕರ ತೇಜೋವಧೆಯುಂಟುಮಾಡುತ್ತವೆ ಎಂಬುದು ಪ್ರತಿಭಟನಕಾರರ ಅಭಿಪ್ರಾಯವಾಗಿತ್ತು.
ಪ್ರತಿಭಟನಕಾರರನ್ನು ತಮ್ಮ ಕಚೇರಿಯಲ್ಲಿ ಭೇಟಿ ಮಾಡಿ, ಅವರ ವಾದಗಳನ್ನೆಲ್ಲಾ ಕೇಳಿದ ನಂತರ ಮಾತನಾಡಿದ ರವಿ ಬೆಳಗೆರೆ, ಈ ಚಿತ್ರದ ಒಂದು ಪಾತ್ರಕ್ಕೆ ನಾನು ತಂತ್ರೇಗೌಡಎಂದು ಹೆಸರಿಟ್ಟಿದ್ದೇನೆಯೇ ಹೊರತು ಕುತಂತ್ರೇಗೌಡ ಎಂದೇನೂ ಇಟ್ಟಿಲ್ಲ. ಹಾಗಿರುವಾಗ ತೇಜೋವಧೆ ಹೇಗಾಗುತ್ತದೆ.
ಅಷ್ಟಕ್ಕೂ ಚಿತ್ರದ ಪಾತ್ರಗಳಿಗೆ ಹೆಸರಿಡುವ ಸ್ವಾತಂತ್ರ್ಯ ಚಿತ್ರ ನಿರ್ಮಾಪಕನಿಗೆ ಇದ್ದೇ ಇರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಹೆಸರುಗಳನ್ನು ಬದಲಿಸುವುದಿಲ್ಲ ಎಂದರು. ಈ ಚಿತ್ರದ ಶೀರ್ಷಿಕೆಗೆ ಅನುಮೋದನೆಯನ್ನು ಪಡೆಯುವಾಗಲೇ ಕೊಂಚ ಮಟ್ಟಿನ ಅಡೆತಡೆಗಳು ಉಂಟಾಗಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
|