ಗೀತಾಚಾರ್ಯ ಕೃಷ್ಣನ ಕ್ಷೇತ್ರದಲ್ಲೀಗ ಪರ್ಯಾಯದ್ದೇ ವಿವಾದ. ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಪರ್ಯಾಯಕ್ಕೀಗ ಪಂಥಾಹ್ವಾನದ ಸ್ವರೂಪ ಸಿಕ್ಕಿದೆ.
ಶ್ರೀಕೃಷ್ಣನ ಪೂಜೆಗೆ ಪಟ್ಟುಹಿಡಿದಿರುವ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥರು ಪಂಡಿತರ ಉಪಸ್ಥಿತಿಯಲ್ಲಿ ತಮ್ಮೊಂದಿಗೆ ಚರ್ಚೆಗೆ ಬರಲಿ ಎಂದು ಪೇಜಾವರ ಶ್ರೀಗಳು ಆಹ್ವಾನಿಸಿರುವುದು ಇತ್ತೀಚಿನ ಬೆಳವಣಿಗೆ.
ವಿದೇಶದಲ್ಲಿ ಧರ್ಮ ಪ್ರಚಾರ ಮಾಡಿಬಂದಿದ್ದಾರೆ ಎಂಬ ಒಂದೇ ಕಾರಣಕ್ಕೆ ಶ್ರೀಕೃಷ್ಣನ ಪೂಜೆಗೆ ಅವಕಾಶ ನೀಡಿದರೆ, ಮುಂಬರುವ ಮಠಾಧೀಶರು ಸಿಂಗಪುರದಲ್ಲೋ, ಪ್ಯಾರಿಸ್ಸಿನಲ್ಲೋ ಮೋಜು ಮಾಡಿ, ತಮ್ಮ ಪರ್ಯಾಯ ಕಾಲದಲ್ಲಿ ಶ್ರೀಕೃಷ್ಣ ಪೂಜೆಗೆ ಅವಕಾಶ ಕೇಳುವ ಸಾಧ್ಯತೆಗಳಿವೆ. ಈ ಕಾರಣದಿಂದ ಕೆಲವೊಂದು ಕಟ್ಟುಪಾಡುಗಳು ಅನಿವಾರ್ಯ ಎಂಬುದು ಪೇಜಾವರರ ಸಮರ್ಥನೆ.
ಶ್ರೀಕೃಷ್ಣ ದೇವಾಲಯ ಎಲ್ಲರಿಗೂ ಸಂಬಂಧಿಸಿದ್ದಾದರೂ ಇಲ್ಲಿನ ಗರ್ಭಗುಡಿಯೊಳಗಿನ ಪೂಜೆಯ ವಿಷಯ ಕೇವಲ ಅಷ್ಟಮಠಗಳಿಗೆ ಸಂಬಂಧಿಸಿದೆ. ಇದರಲ್ಲಿ ಹೊರಗಿನವರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂಬುದು ಪೇಜಾವರರ ಸ್ಪಷ್ಟೀಕರಣ.
|