ಕಣ್ಮರೆಯಾಗುತ್ತಿರುವ ಕರಕುಶಲ ಕಲೆಯನ್ನು ಧರ್ಮಸ್ಥಳದಲ್ಲಿನ ಈ ವಸ್ತು ಪ್ರದರ್ಶನ ತನ್ನದೇ ಆದ ಕಲಾತ್ಮಕ ರೀತಿಯಲ್ಲಿ ಪುನರುಜ್ಜೀವನಗೊಳಿಸಿದೆ ಎಂದು ಚಿಕ್ಕಮಗಳೂರಿನ ಸಂಸದ ಡಿ.ಸಿ.ಶ್ರೀಕಂಠಪ್ಪ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಸಂದರ್ಭದಲ್ಲಿ ರಾಜ್ಯ ಮಟ್ಟದ 30ನೇ ವಸ್ತು ಪ್ರದರ್ಶನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮೀಣ ಪ್ರದೇಶದ ಬಹಳಷ್ಟು ಜನರಿಗೆ ಇಲ್ಲಿನ ಗ್ರಾಮೀಣಾಭಿವೃದ್ದಿ ಯೋಜನೆಯಿಂದ ಉದ್ಯೋಗಾವಕಾಶಗಳು ಸಿಕ್ಕಿವೆ. ಇದರಿಂದ ಅವರು ಸಮಸ್ಯೆಗಳಿಂದ ಹೊರಬರುವುದಕ್ಕಷ್ಟೇ ಅಲ್ಲದೆ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಲೂ ಸಹಾಯಕವಾಗಿದೆ ಎಂದು ಶ್ರೀಕಂಠಪ್ಪ ಈ ಸಂದರ್ಭದಲ್ಲಿ ನುಡಿದರು.
ಇದರಲ್ಲಿ ವ್ಯವಸ್ಥೆಗೊಳಿಸಲಾದ ವೈವಿಧ್ಯಮಯ ಮಳಿಗೆಗಳಿಂದ ಪ್ರದರ್ಶನಕ್ಕೆ ಮೆರುಗು ಬಂದಿದೆ ಎಂದು ತಿಳಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗ್ಗಡೆಯವರು, ಜನರು ತಮ್ಮ ಮನೆಗೆ ಹಾಗೂ ಉತ್ತಮ ಜೀವನ ಸಾಗಿಸಲೆಂದು ಖರೀದಿಸುವ ವಸ್ತುಗಳನ್ನು ಬಳಸುವುದು ಹೇಗೆ ಎಂಬುದರ ಕುರಿತು ಈ ಪ್ರದರ್ಶನ ಮಾಹಿತಿ ನೀಡುತ್ತದೆ ಎಂದೂ ನುಡಿದರು.
|