ದೀಪವನ್ನು ಬೆಳಗುವಾಗ ಶತ್ರು ಬುದ್ದಿ ವಿನಾಶಾಯ ದೀಪ ಜ್ಯೋತಿ ನಮೋಸ್ತುತೇ ಎಂದು ಹೇಳುವುದು ಭಾರತೀಯರ ಉದಾತ್ತ ಚಿಂತನೆಯನ್ನು ಬಿಂಬಿಸುತ್ತದೆ. ಇದು ಮತ್ತೊಮ್ಮೆ ಅನುಭವಕ್ಕೆ ಬಂದಿದ್ದು ಧರ್ಮಸ್ಥಳದಲ್ಲಿ.
ಖ್ಯಾತ ನೃತ್ಯಗಾತಿ ಹಾಗೂ ಸಂಗೀತ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷೆ ಪಧ್ಮಭೂಷಣ ಡಾ||ಸೋನಾಲ್ ಮಾನ್ಸಿಂಗ್‌ರ ವರು ಇಲ್ಲಿ ನಡೆಯುತ್ತಿರುವ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದಲ್ಲಿ ಅಮೃತ ಮಹೋತ್ಸವ ಭವನವನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಾ, ಈ ದೀಪವು ನಮ್ಮೆಲ್ಲರ ಹೃದಯ, ಮನಸ್ಸು ಹಾಗೂ ಆಶಯಗಳಲ್ಲಿ ಅಮೃತವರ್ಷಿಣಿ ಗಂಗೆಯನ್ನು ಹರಿಸಲಿ ಎಂದದ್ದು ಸಂದರ್ಭೋಚಿತವಾಗಿತ್ತು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ|| ವೀರೇಂದ್ರ ಹೆಗ್ಗಡೆಯವರು, ನಿರಂತರ ಮಳೆಯ ನಡುವೆಯೂ ಕೇವಲ 55 ದಿನಗಳಲ್ಲಿ ನಿರ್ಮಿಸಲಾಗಿರುವ ಈ ಭವನದಲ್ಲಿ 3,000 ಜನಗಳು ಕುಳಿತುಕೊಳ್ಳಬಹುದಾಗಿದೆ ಎಂದರು.
ಈ ಭವನವನ್ನು ಉದ್ಘಾಟಿಸುವುದಕ್ಕೆ ಮುಂಚೆ ವಾದ್ಯದ ಮೇಳ, ಅದನ್ನು ಹಿಂಬಾಲಿಸಿಕೊಂಡು ಬರುವ, ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕಲಶ ಹಿಡಿದ ಹುಡುಗಿಯರ ದಂಡು ವೇದಿಕೆಗೆ ಬಂದಿದ್ದು ಸಭೆಗೆ ಒಂದು ಭವ್ಯ-ದಿವ್ಯ ಆಯಾಮವನ್ನು ನೀಡಿತ್ತು.
|