ತಾವು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ ಅಕ್ಷರ ದಾಸೋಹ ಯೋಜನೆಗೆ ಮಠಗಳೇ ಸ್ಪೂರ್ತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರರಾಜ್ಯಪಾಲರಾದ ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಜೀರಗಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು, ವಿಶ್ವಬಂಧುತ್ವ ಹಾಗೂ ಮಾನವತೆಯಂಥ ಉದಾತ್ತ ಚಿಂತನೆಗಳನ್ನು ಇಡೀ ವಿಶ್ವಕ್ಕೆ ಸಾರುವಲ್ಲಿ ಮಠಗಳ ಪಾತ್ರ ದೊಡ್ಡದು. ಒಂದು ವೇಳೆ ಸರ್ಕಾರಗಳೇನಾದರೂ ಅಲ್ಲೊಂದು ಇಲ್ಲೊಂದು ಒಳ್ಳೆಯ ಕೆಲಸ ಮಾಡಿದ್ದರೆ ಅದಕ್ಕೆ ಇಂಥ ಮಠಗಳೇ ಸ್ಪೂರ್ತಿ ಎಂದರು.
ಅಕ್ಷರ ಜ್ಞಾನ ಹಾಗೂ ಪ್ರಾಥಮಿಕ ಆರೋಗ್ಯಗಳನ್ನು ಒದಗಿಸುವುದರಿಂದ ಮಾತ್ರವೇ ಹಳ್ಳಿಗಾಡು ಪ್ರದೇಶಗಳ ಅಭಿವೃದ್ದಿ ಸಾಧ್ಯ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ತಾವು ಜಾರಿಗೆ ತಂದಿದ್ದ ಕೃಷಿಕರಿಗಾಗಿ ಆರೋಗ್ಯ ವಿಮೆ ಎಂಬ ಯೋಜನೆಯು ಈಗಲೂ ಮುಂದುವರಿದಿರುವುದು ಅಭಿನಂದನೀಯ ಎಂದು ಕೃಷ್ಣ ತಿಳಿಸಿದರು.
|